ಆಲೂರಿನಲ್ಲಿ ಮರ್ಯಾದಾ ಪುರುಷೋತ್ತಮನ ಆರಾಧನೆ

IMG20250406124001
Published on

  ರಾಮನವಮಿ ಸಂಭ್ರಮ

ಆಲೂರು: ತಾಲೂಕಿನಾದ್ಯಂತ ಶ್ರೀ ರಾಮನವಮಿಯನ್ನು ಭಾನುವಾರ ಶ್ರದ್ಧಾ-ಭಕ್ತಿಯಿಂದ ಆಚರಣೆ ಮಾಡಲಾಯಿತು. ಆಲೂರು ತಾಲೂಕಿನ ಕಸಬಾ, ಪಾಳ್ಯ, ಕೆಂಚಮ್ಮ ಹೊಸಕೋಟೆ ಹಾಗೂ ಕುಂದೂರು ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ರಾಮ ದೇವರ ಮಂದಿರ ಮತ್ತು ಆಂಜನೇಯನ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ರಾಮಭಕ್ತರು ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಣೆ ಮಾಡಿದರು.

ಕಸಬಾ ಹೋಬಳಿಯ ಆಲೂರು ಪಟ್ಟಣದ ಖಾಜಿ ಮೊಹಲ್ಲಾದ ರಾಮ ಮಂದಿರದಲ್ಲಿ ರಾಮ ಮಂದಿರ ಜೀರ್ಣೋದ್ಧಾರ ಸಮಿತಿಯವರಿಂದ ವಿಶೇಷ ಪೂಜಾ ಕೈಂಕರ್ಯ ಸಂಪನ್ನಗೊಂಡಿತು. ಮಂದಿರಕ್ಕೆ ಬಂದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ನಡೆಯಿತು. ರಾಮ ಮಂದಿರ ಸಮಿತಿಯ ತಾಂತ್ರಿಕ ಸಲಹೆಗಾರ ಲಕ್ಷ್ಮಣ್ ಹಳೆ ಆಲೂರು ಮಾತನಾಡಿ, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಮ್ಮ ಪೂರ್ವಜರ ಮತ್ತು ಕೋಟ್ಯಂತರ ಭಕ್ತರ ಶತಮಾನಗಳ ಕನಸು ನನಸಾಗಿದೆ. ರಾಮ ನಾಮ ಜಪದ ಮೂಲಕ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದರು. ರಾಮ ನಾಮ ಜಪ ಮನವನ್ನು ಶುದ್ಧೀಕರಿಸಿ ಆಧ್ಯಾತ್ಮಿಕ ಶಕ್ತಿ ತುಂಬುತ್ತದೆ. ದೈಹಿಕ ಶಕ್ತಿಯನ್ನು ವೃದ್ಧಿಸಿ ಆರೋಗ್ಯವಂತರಾಗಿ ನಾವು ಬಾಳಲು ಸಹಕಾರಿ ಎಂದು ತಿಳಿಸಿದರು. ಸಮಿತಿ ಅಧ್ಯಕ್ಷ ಉಮೇಶ ಮಾತನಾಡಿ, ರಾಮನವಮಿ ಂಬುದು ಹಿಂದು ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಮರ್ಯಾದಾ ಪುರುಷೋತ್ತಮ ರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ ಈ ಆಚರಣೆಯು ಭಕ್ತರಿಗೆ ಧರ್ಮ, ಶಿಷ್ಟಾಚಾರ, ಸತ್ಯ ಮತ್ತು ನೀತಿಯ ಮಾರ್ಗವನ್ನು ನೆನಪಿಸುವ ಪವಿತ್ರ ದಿನವಾಗಿದೆ ಎಂದು ತಿಳಿಸಿದರು.

ಮುಖಂಡರಾದ ಹರೀಶ್, ರಮೇಶ್, ಯಶ್ವಂತ್, ದರ್ಶನ್ ಸಂದೀಪ್, ಜಗನ್ನಾಥ್, ಸುಬ್ರಹ್ಮಣ್ಯ, ಮೋಹನ್, ಗಜೇಂದ್ರ ಬಿಜೆಪಿ ನಗರಾಧ್ಯಕ್ಷ ಲೋಹಿತ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net