ಸೇವಾ ಚಟುವಟಿಕೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ

1001624252
Published on

ಆಲೂರು : ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ತಾಳೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿ. ಕೆ. ವೆಂಕಟೇಶ್ ತಿಳಿಸಿದರು. ತಾಳೂರು ಡೇರಿ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಮಂಜೂರಾದ 1,50,000 ರೂ. ಮೊತ್ತದ ಮಂಜೂರಾತಿ ಪತ್ರ ಸ್ವೀಕರಿಸಿ ಮಾತನಾಡಿದರು.

ಹಳ್ಳಿಗಾಡಿನ ಪ್ರಗತಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡುತ್ತಿರುವ ಸಹಕಾರ ದೊಡ್ಡದು ಎಂದು ಅವರು ಶ್ಲಾಘಿಸಿದರು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು, ವಸತಿರಹಿತರಿಗೆ ಸೂರು ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಭವನಗಳ ನಿರ್ಮಾಣ, ವೃದ್ಧರಿಗೆ ಮಾಶಾಸನ, ಅಂಗವಿಕಲರಿಗೆ ಸಾಧನಗಳು, ಡೇರಿಗಳ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡಲಾಗುತ್ತಿದೆ. ಈ ಸವಲತ್ತುಗಳನ್ನು ಬಳಸಿಕೊಂಡು ಉನ್ನತಿ ಸಾಧಿಸೋಣ ಎಂದು ಅವರು ಹೇಳಿದರು.

ಕಾಳಜಿ ಬಹು ಮುಖ್ಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರತ್ನಾಕರ್ ಕೊಠಾರಿ ಮಾತನಾಡಿ, ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾಳಜಿ ಮತ್ತು ಕಳಕಳಿ ಬಹು ಮುಖ್ಯ ಎಂದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಅಭಿವೃದ್ಧಿ ಹೊಂದಬೇಕು. ನೊಂದವರ ಮತ್ತು ಬಡವರ ಧ್ವನಿಯಾಗಿ ಸಂಘ, ಸಂಸ್ಥೆಗಳು ನಾವು ಕಾರ್ಯನಿರ್ವಹಿಸಬೇಕು. ಅನಾಥರಿಗೆ ನೆರವಾಗಿ ನಿಲ್ಲಬೇಕು ಎಂದರು. ಪುರಾತನ ದೇವಾಲಯ, ಸರ್ಕಾರಿ ಶಾಲೆಗಳ ಜೀರ್ಣೋದ್ಧಾರ, ಹೈನುಗಾರಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಹಳ್ಳಿಗಾಡಿನ ಜನರು ಸಾಮಾಜಿಕ, ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು ಎಂದು ಅವರು ಸಲಹೆ ನೀಡಿದರು. ಡೇರಿ ಕಾರ್ಯದರ್ಶಿ ಟಿ. ಈ ಧರ್ಮ ಸೇರಿದಂತೆ ಗ್ರಾಮಸ್ಥರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net