

ಆಲೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಖಾಜಿ ಮೊಹಲ್ಲಾದಲ್ಲಿರುವ ಬಿಲಿವರ್ಸ್ ಚರ್ಚ್, ಜೊಸೆಫ್ ನಗರದ ಸಂತ ಜೋಸೆಫರ ದೇವಾಲಯ, ಮಗ್ಗೆ ಗ್ರಾಮದ ಸಂತ ಫ್ರಾನ್ಸಿಸ್ ಜೇವಿಯರ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಚರ್ಚ್‌ಗಳಲ್ಲಿ ಕ್ರೈಸ್ತರು ಹೊಸ ಉಡುಪುಗಳನ್ನು ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿಗಳನ್ನು ಹಂಚಿ ತಿನ್ನುವ ಮೂಲಕ ಈ ಹಬ್ಬ ಶಾಂತಿ ಸೌಹಾರ್ದತೆ ಸಂಕೇತ ಎಂಬ ಸಂದೇಶವನ್ನು ಸಾರಿದರು. ಜೊಸೆಫ್ ನಗರದಲ್ಲಿರುವ ಸಂತ ಜೋಸೆಫರ ದೇವಾಲಯದ ಧರ್ಮಗುರು ಒಂದನೇಯ ಸ್ವಾಮಿ ಆಲ್ವಿನ್ ಜೊಸೆಫ್ ಡಿಸೋಜಾ ಮಾತನಾಡಿ, ಕ್ರಿಸ್‌ಮಸ್ ಹಬ್ಬ ಕ್ರೈಸ್ತರೆಲ್ಲರೂ ಬಹಳ ಸಂಭ್ರಮದಿಂದ ಆಚರಿಸುವಂತಹ ಹಬ್ಬ. ಕ್ರೈಸ್ತರಿಗೆ ಮೂರು ಹಬ್ಬಗಳು ಮಹತ್ವದ್ದಾಗಿವೆ. ಕ್ರಿಸ್‌ಮಸ್ ಹಬ್ಬವನ್ನು ಬೆಳಕಿನ ಹಬ್ಬವೆಂದು ಆಚರಿಸಲಾಗುತ್ತದೆ. ಯೇಸುಕ್ರಿಸ್ತನು ಬೆಳಕಾಗಿ ಬಂದಿದ್ದಾನೆ. ಹಾಗಾಗಿ ಎಲ್ಲ ಚರ್ಚ್‌ಗಳಲ್ಲಿ ಕ್ಯಾಂಡಲ್ಗಳನ್ನು ಹಿಡಿದು ಯೇಸುವಿನ ಬೆಳಕು ನಮ್ಮೆಲ್ಲ ಸಂಕಷ್ಟವನ್ನು ದೂರ ಮಾಡುತ್ತದೆ ಎಂದು ಹಬ್ಬ ಆಚರಿಸಲಾಗುತ್ತದೆ ಎಂದರು.