ಒತ್ತಡಗಳಿಗೆ ಮಣಿಯದೆ ಒತ್ತುವರಿ ತೆರವುಗೊಳಿಸಿ

16-02-2020 ALRp01
Published on

ಆಲೂರು: ನಗರ ಹಾಗೂ ಗ್ರಾಮಿಣ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ತೆರವುಗೊಳಿಸುವಂತೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಯು.ಆರ್.ಮಂಜುನಾಥ್ ತಿಳಿಸಿದರು.


ತಾಲೂಕು ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಲ್ಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಕೆರೆಗಳ ದಾಖಲೆ ಪ್ರಕಾರ, ಕೆರೆ ಅಕ್ಕಪಕ್ಕದ ರೈತರು ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಅಂತಹ ಕೃಷಿಕರ ಹೆಸರನ್ನು ಅಧಿಕಾರಿಗಳು ಪಟ್ಟಿ ಮಾಡಿ, ಒತ್ತುವರಿ ಮಾಡಿಯಾಗಿರುವ ಭೂಮಿಯನ್ನು ಸರ್ಕಾರ ತನ್ನ ಸುಪರ್ದಿಗೆ ತಗೆದುಕೊಳ್ಳುವಂತಾಗಬೇಕು. ಜತೆಗೆ ಸುಪರ್ದಿಗೆ ಒಳಗಾಗದ ಭೂಮಿಯನ್ನು ಮತ್ತೆ ಕೆರೆ ಅಚ್ಚುಕಟ್ಟು ಪ್ರದೇಶವನ್ನಾಗಿ ಮಾಡುವಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚಿಸಿದರು.


ಆಲೂರು ತಾಲೂಕಿನಲ್ಲಿ ಸುಮಾರು 926 ಕೆರೆಗಳಿದ್ದು, ಅದರಲ್ಲಿ 57 ಕೆರೆಗಳು ಈಗಾಗಲೇ ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಇದೆ. ಇನ್ನು 820 ಕೆರೆಗಳ ಸರ್ವೇ ಕಾರ್ಯ ನಡೆಸಬೇಕಾಗಿದೆ. ಸರ್ಕಾರದ ಆದೇಶದಂತೆ 2020ರೊಳಗೆ ಕೆರೆಗಳ ಸರ್ವೇ ಕಾರ್ಯ ಸಂಪೂರ್ಣವಾಗಿ ಮುಗಿಯಬೇಕು ಎಂದು ತಿಳಿಸಿದರು.


ತಹಸೀಲ್ದಾರ್ ಶಿರೀನ್ ತಾಜ್ ಮಾತನಾಡಿ, ತಾಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯ 471 ಕೆರೆಗಳು, ಕಂದಾಯ ಇಲಾಖೆಯ 505 ಹಾಗೂ ಸಣ್ಣನೀರಾವರಿ ಇಲಾಖೆಯ 4 ಕೆರೆಗಳಿವೆ. ಇವುಗಳ ಸರ್ವೇ ಕಾರ್ಯವನ್ನು ಭೂ ದಾಖಲೆ ಇಲಾಖೆ ಸಹಾಯ ನಿರ್ದೆಶಕರಿಗೆ ವಹಿಸಿದ್ದು 2020ರೊಳಗೆ ತೆರವು ಕಾರ್ಯ ಮುಗಿಸಿಕೊಡುವಂತೆ ಸೂಚಿಸಲಾಗಿದೆ. ಜತೆಗೆ ಪ್ರತಿ ತಿಂಗಳಿಗೊಮ್ಮೆ ತಾಲೂಕು ಕಚೇರಿಗೆ ತಿಂಗಳ ವರದಿ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.


ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ಸತೀಶ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net