ಮಳಲಿಯಲ್ಲಿ ಆಳುಪರ ಕಾಲದ ಶಾಸನ ಪತ್ತೆ

Alupa inscription
Published on

ಗುರುಪುರ: ಗಂಜಿಮಠದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸುತ್ತುಪೌಳಿಯ ಮೂಲೆಯಲ್ಲಿ ಮುಕ್ಕಾಲು ಭಾಗ ಮಣ್ಣಲ್ಲಿ ಹೂತಿದ್ದ ಆಳುಪರ ಕಾಲದ ಶಾಸನ ಪತ್ತೆಯಾಗಿದೆ.

ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ಮಳಲಿಯ ದೇವರಗುಡ್ಡೆಯಲ್ಲಿ ಎರಡು ತಿಂಗಳ ಹಿಂದೆ ನಡೆಸಲಾದ ಅಷ್ಟಮಂಗಲ ಪ್ರಶ್ನೆಯ ವೇಳೆ ಇಲ್ಲಿ(ದೇವರಗುಡ್ಡೆ) ಶ್ರೀ ಸೂರ್ಯನಾರಾಯಣ ದೇವಸ್ಥಾನವಿತ್ತು. ಇದಕ್ಕೆ ಸಂಬಂಧಿಸಿ ಶಾಸನಗಳು ಸುತ್ತಲ ಪ್ರದೇಶದಲ್ಲಿ ಮಣ್ಣಲ್ಲಿ ಹೂತು ಹೋಗಿವೆ ಎಂಬ ಉತ್ತರ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ಹತ್ತಿರದ ದೇವಾಲಯವೊಂದರಲ್ಲಿ ಗೋಚರಿಸಿದ ಶಾಸನದ ಉತ್ಖನನ, ಅಧ್ಯಯನ ನಡೆಸಿದಾಗ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ತುಳು ಪುರಾತತ್ವ ಸಂಶೋಧಕ ಸುಭಾಷ್ ನಾಯಕ್ ಬಂಟಕಲ್ಲು ಅವರು ಶಾಸನದ ಅಧ್ಯಯನ ನಡೆಸಿದಾಗ ಇದು ಆಳುಪರ ಕಾಲದ ಶಾಸನವೆಂದು ತಿಳಿದು ಬಂದಿದೆ. ಶಾಸನ ಆಧರಿಸಿ ಇದೇ ಕಾಲದಲ್ಲಿ ದೇವರಗುಡ್ಡೆಯಲ್ಲಿ ಶ್ರೀ ಸೂರ್ಯನಾರಾಯಣ ದೇವಾಲಯ ಇದ್ದಿರಬಹುದೆಂದು ಖಚಿತಪಡಿಸಲಾಗಿದೆ.

ರಾಜ ಕುಲಶೇಖರನ ಹೆಸರು ಉಲ್ಲೇಖ: ಗ್ರಾನೈಟ್ ಶಿಲೆಯ ಎರಡೂ ಬದಿಯ ಹಾಗೂ ಸುತ್ತಲೂ ಶಾಸನ ಉಲ್ಲೇಖವಿದೆ. 14 ಸಾಲು ತುಳು ಲಿಪಿ ಹಾಗೂ ಎರಡು ಸಾಲು ಕನ್ನಡ ಲಿಪಿಯಲ್ಲಿ ಶಾಸನ ಕೆತ್ತಲಾಗಿದೆ. ಒಟ್ಟು 22 ಇಂಚು ಎತ್ತರ, 14 ಇಂಚು ಅಗಲವಾದ ಶಾಸನ 14ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಆಳುಪರ ಕಾಲದ ರಾಜ ಕುಲಶೇಖರನ ಹೆಸರು ಉಲ್ಲೇಖವಿದೆ. ಉಳಿದಂತೆ ಬಿಡಿಬಿಡಿ ಬರೆಹಗಳಿರುವುದರಿಂದ ಶಾಸನದ ಒಟ್ಟು ತಾತ್ಪರ್ಯ ಸ್ಪಷ್ಟವಾಗಿಲ್ಲ. ಶಾಸನದ ಕಾಲಮಾನವೂ ಇಲ್ಲ. ಆದರೆ ಇದು ಆಳುಪರ ಕಾಲದಲ್ಲಿದ್ದ 1ನೇ ಕುಲಶೇಖರ(ಕ್ರಿ.ಶ 1170-1220), 2ನೇ ಕುಲಶೇಖರ(ಕ್ರಿ.ಶ 1321-1346) ಮತ್ತು ಮೂರನೇ ಕುಲಶೇಖರರಲ್ಲಿ(1355-1390) ಒಬ್ಬರನ್ನು ಉಲ್ಲೇಖಿಸಿ ಬರೆಯಲಾದ ಶಾಸನ ಎಂದು ಅರ್ಥೈಸಿಕೊಳ್ಳಬಹುದು. ಕಾಸರಗೋಡಿನ ಕಾಲೇಜು ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು ಅವರು ಶಾಸನ ಅರ್ಥೈಸುವಲ್ಲಿ ಸಹಕರಿಸಿದ್ದಾರೆ.

ಮಳಲಿ ಶಾಸನ ಅಧ್ಯಯನಕ್ಕೆ ದೇವಸ್ಥಾನದ ಅರ್ಚಕ ರತ್ನಾಕರ ಭಟ್, ಟ್ರಸ್ಟಿ ಪ್ರೇಮಚಂದ್ರ ನಾಯಕ್, ಹರೀಶ್ ಪೈ, ಅಕ್ಷಯ್ ಕುಮಾರ್ ಜೈನ್, ಪುರಂದರ ಕುಲಾಲ್, ಪ್ರಮೀಳಾ ಭಟ್, ಬೂಬು ಮೇಸ್ತ್ರಿ, ನಾಗೇಶ್ ಸಹಕರಿಸಿದರು. ಯುವ ತುಳುನಾಡು ಸಂಘಟನೆಯ ರಿತೇಶ್ ಡಿಸೋಜ ಕ್ಷೇತ್ರಾಧ್ಯಯನದಲ್ಲಿ ನೆರವಾದರು.

ದೇವರಗುಡ್ಡೆಯಲ್ಲಿ ನಡೆಸಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ನಾವು ಸ್ಥಳೀಯ ಲಕ್ಷೀ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಂಡು ಬಂದ ಶಾಸನ ಅಧ್ಯಯನಕ್ಕೆ ಮುಂದಾದೆವು. ಶಾಸನ ಅಷ್ಪಸ್ಟವಾಗಿದ್ದರೂ, ದೇವರಗುಡ್ಡೆಯಲ್ಲಿ ಸೂರ್ಯನಾರಾಯಣ ದೇವಾಲಯವಿದ್ದ ಕಾಲ ಆಳುಪರ ಆಳ್ವಿಕೆಯೊಳಪಟ್ಟಿತ್ತು ಎಂಬ ಅಂಶ ಬಹುತೇಕ ಖಚಿತವಾಗಿದೆ. ಈ ಭಾಗದಲ್ಲಿ ಇನ್ನೂ ಕೆಲವು ಶಾಸನಗಳಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಸಂಶೋಧನೆ ಆಗಬೇಕಿದೆ. ಅಕ್ಷಯ ಕುಮಾರ್ ಜೈನ್ ಮಳಲಿ ಪುರಾತತ್ವ ಅಧ್ಯಯನಕಾರ ಹಾಗೂ ನಿವೃತ್ತ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net