ಡಿ.೨೭ ರಂದು ಹಳೇ ವಿದ್ಯಾರ್ಥಿಗಳ ಸಮ್ಮಿಲನ

chennamma school
Published on

ಮಡಿಕೇರಿ: ಗ್ರಾಮೀಣ ಪ್ರದೇಶದಲ್ಲಿ ನೆಲೆನಿಂತಿರುವ ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಎಜುಕೇಶನ್ ಸೊಸೈಟಿ ಈಗ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು ಡಿ.೨೭ ಮತ್ತು ೨೮ ರಂದು ಸಂಸ್ಥೆಯ ೬೦ನೇ ವರ್ಷಾರಣೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ.ಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾನಿಗಳಾದ ದಿ.ಲೆಫ್ಟಿನೆಂಟ್ ಕರ್ನಲ್ ಡಿ.ಸಿ.ಬಸಪ್ಪ ಅವರ ಪ್ರಯತ್ನದಿಂದಾಗಿ ಅವರ ತಾಯಿ ಡಿ.ಚೆನ್ನಮ್ಮ ಸ್ಮರಣಾರ್ಥ ೧೯೬೦ರ ಜು.೨೨ ರಂದು ಆರಂಭವಾದ ಪ್ರೌಢಶಾಲೆ ೬ ದಶಕಗಳಲ್ಲಿ ಈ ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಿವಂಗತರಾದ ಮಚ್ಚಂಡ ಗಣಪತಿ, ಪುಟ್ಟುಸ್ವಾಮಿ ಮುತ್ತಯ್ಯ ಗುಂಡುಕುಟ್ಟಿ ಮಂಜುನಾಥಯ್ಯ, ಎಂ.ಎ.ಪೊನ್ನಪ್ಪ, ಕೆ.ಡಿ.ಸೋಮಯ್ಯ, ಸಿ.ಎ.ಪೂವಯ್ಯ, ಎಂ.ಜಿ.ಬೋಪಣ್ಣ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದಿಂದಾಗಿ ಶಿಕ್ಷಣ ಸಂಸ್ಥೆಯು ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಸ್ಮರಿಸಿಕೊಂಡರು.

ಪ್ರಸ್ತುತ ಕಾಲೇಜಿನ ವಜ್ರಮಹೋತ್ಸವದ ಅಂಗವಾಗಿ ಡಿ.೨೭ ರಂದು ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿತವಾಗಿದೆ. ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಹಳೇ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಮನರಂಜನಾ ಕ್ರೀಡಾಸ್ಪರ್ಧೆಗಳು ಆಯೋಜಿಸಲ್ಪಟ್ಟಿದೆ. ಮಧ್ಯಾಹ್ನ ೧ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ.ಬೋಪಣ್ಣ, ಅಧ್ಯಕ್ಷತೆಯ ಕಾರ್ಯಕ್ರಮವನ್ನು ಎಂ.ಜಿ.ಬೋಪಣ್ಣ ಉದ್ಘಾಟಿಸಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ, ಕಾಫಿ ಬೆಳೆಗಾರರಾದ ಸಿ.ಪಿ.ಮುದ್ದಪ್ಪ, ಕೆ.ಎಸ್.ಮಂಜುನಾಥ್, ಹೆಚ್.ಎ.ಎಸ್.ಉತ್ತಯ್ಯ ಇತರರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ೫ ಗಂಟೆಯಿಂದ ೭ ಗಂಟೆಯವರೆಗೆ ಮೈಸೂರಿನ ಖ್ಯಾತಕಲಾವಿದರಿಂದ ಸಂಗೀತ, ನತ್ಯ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ.ಕುಮಾರ್ ತಿಳಿಸಿದರು.

ಡಿ.೨೮ ರಂದು ಶನಿವಾರ ಬೆಳಗ್ಗೆ ೧೧ ಗಂಟೆಗೆ ೨೦ ಲಕ್ಷ ರುಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಭೋಜನಾಲಯವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮವನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಸುಜಾಕುಶಾಲಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೆಫ್ಪಿನೆಂಟ್ ಕರ್ನಲ್ ಸಿ.ಪಿ.ಕಾರ್ಯಪ್ಪ, ರಾಜ್ಯ ಸರ್ಕಾರದ ಚೀಫ್ ಎಲೆಕ್ಟಿಕಲ್ ಇನ್ಸ್‌ಪೆಕ್ಟರ್ ರೋಷನ್ ಅಪ್ಪಚ್ಚು, ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಸಿ.ಜಿ.ಕುಶಾಲಪ್ಪ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್, ಬಿ.ಎ.ಜೀವಿಜಯ, ಪಾಂಡಿಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಿ.ಆರ್.ಬಾಬು, ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಮುಖ್ಯಶಿಕ್ಷಕಿ ಕೆ.ಯು.ರೀಟಾ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ವಜ್ರದೀವಿಗೆ ಸ್ಮರಣ ಸಂಚಿಕೆಯನ್ನೂ ಲೋಕಾರ್ಪಣೆ ಮಾಡಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕತಿಕ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ಮತ್ತು ಯುಕೆಜಿಯನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾರಂಭಿಸಲಾಗುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ ೩೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸುಸಜ್ಜಿತವಾದ ೪೦ ಕಂಪ್ಯೂಟರ್ ಹೊಂದಿರುವ ಲ್ಯಾಬ್, ೫ ಸಾವಿರ ಪುಸ್ತಕಗಳ ಗ್ರಂಥಾಲಯ, ಪ್ರಯೋಗಾಲಯ, ೫೦೦ ಜನ ಕೂರಬಹುದಾದ ಸಭಾಂಗಣ, ವಿಶಾಲವಾದ ಆಟದ ಮೈದಾನವನ್ನು ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಹೊಂದಿದೆ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಎ.ನಾಣಿಯಪ್ಪ, ಸಿ.ಪಿ.ಮುದ್ದಪ್ಪ, ಉಪನ್ಯಾಸಕ ಮೋಹನ್ ಹೆಗ್ಗಡೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net