

ಮಡಿಕೇರಿ:
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ೧೯೯೯-೨೦೦೨ರ ವಾಣಿಜ್ಯ ಬ್ಯಾಚ್ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಸೋಮವಾರ ಸಂಭ್ರಮದಿಂದ ನಡೆಯಿತು. ತಮಗೆ ವಿದ್ಯೆ ಕಲಿಸಿದ ಉಪನ್ಯಾಸಕ ವೃಂದದವರಿಗೆ ವಂದಿಸಿದ ಹಳೇ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು.
ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ.ಡಾ.ಬಿ.ರಾಘವ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿ, ಕಳಚಿಹೋದ ಸಂಬಂಧವನ್ನು ಬೆಸೆಯುವತ್ತ ಐತಿಹಾಸಿಕ ಹೆಜ್ಜೆ ಇರಿಸಿದ ೧೯೯೯-೨೦೦೨ನೇ ವಾಣಿಜ್ಯ ಬ್ಯಾಚ್ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಇದು ಕಾಲೇಜ್‌ನ ಎಲ್ಲಾ ವಿದ್ಯಾರ್ಥಿಗಳಿಗೆ ಆದರ್ಶವಾಗಲಿದೆ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಗಾಯತ್ರಿ ದೇವಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳದ ಇಂದಿನ ದಿನಗಳಲ್ಲಿ, ಒಂದು ನಿರ್ದಿ?್ಟ ಬ್ಯಾಚ್‌ನ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರನ್ನು ಕೃತಜ್ಞತಾಪೂರ್ವಕವಾಗಿ ವಂದಿಸಿರುವ ಕಾರ್ಯ ಕಾಲೇಜು ಇತಿಹಾಸದ ಪುಟಗಳಲ್ಲಿ ದಾಖಲಿಸುವಂಥದ್ದು ಎಂದು ಹೇಳಿದರು.
೨೦೦೨ನೇ ಇಸವಿಯಲ್ಲಿ ಉತ್ತೀರ್ಣರಾಗಿ ಅಮೆರಿಕ, ಯು.ಎ.ಇ, ಬೆಂಗಳೂರು ಸೇರಿದಂತೆ ವಿವಿಧ ದೇಶ, ರಾಜ್ಯ ಮತ್ತು ನಗರಗಳಲ್ಲಿ ನೆಲೆಸಿರುವ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಉಪನ್ಯಾಸಕರ ಮಾರ್ಗದರ್ಶನದ ಫಲವಾಗಿ ನಮ್ಮ ಭವಿ?್ಯ ರೂಪಿಸಿಕೊಳ್ಳಲು ಸಾಧ್ಯವಾಯಿತು. ೧೯೪೯ರಲ್ಲಿ ಸ್ಥಾಪನೆಗೊಂಡ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಅಸಂಖ್ಯಾತ ವಿದ್ಯಾರ್ಥಿಗಳ ಭವಿ?್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎರಡು ದಶಕಗಳ ಹಳೆಯ ನೆನಪುಗಳನ್ನು ವಿವರಿಸಿ, ಉಪನ್ಯಾಸಕ ವೃಂದದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕರುಣಾಕರ್, ಆಂಗ್ಲ ವಿಭಾಗದ ಪೂಣಚ್ಚ, ಹಿಂದಿ ವಿಭಾಗದ ಡಾ.ಶ್ರೀಧರ್ ಹೆಗಡೆ, ಅರ್ಥಶಾಸ್ತ್ರ ವಿಭಾಗದ ತಿಪ್ಪೇಸ್ವಾಮಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ರವಿಶಂಕರ್ ಮತ್ತಿತರರು ಇದ್ದರು.