

ಮಡಿಕೇರಿ: ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ, ವಿಲೀನಗೊಳಿಸುವ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿರುವುದನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಳೆ ವಿದ್ಯಾರ್ಥಿ ಸಂಘ ಉಗ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಗತ್ತಿನ ಯಾವುದೇ ದೇಶದಲ್ಲಿ ಹಣಕಾಸಿನ ಕ್ಷುಲ್ಲಕ ಕಾರಣ ನೀಡಿ ಸರ್ಕಾರಗಳು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದ ನಿದರ್ಶನಗಳು ಇಲ್ಲ. ಆದ್ದರಿಂದ ಸರಕಾರವು ಉನ್ನತ ಶಿಕ್ಷಣ ಉಪಸಮಿತಿಯ ಈ ಅವೈಜ್ಞಾನಿಕ ಹಾಗೂ ಅವಾಸ್ತವಿಕ ಪ್ರಸ್ತಾವನೆಯನ್ನು ಕೂಡಲೇ ತಿರಸ್ಕರಿಸಬೇಕು ಮತ್ತು ಸರಕಾರವು ೨೦೨೫ರ ಆಯ-ವ್ಯಯದಲ್ಲಿ ಅಗತ್ಯ ಅನುದಾನವನ್ನು ಕೊಡಗು ವಿಶ್ವವಿದ್ಯಾಲಯಕ್ಕೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ವಿಶಿಷ್ಟ ಹಿನ್ನಲೆಯಳ್ಳ ಜಿಲ್ಲೆಯಾಗಿದ್ದರೂ, ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷಗಳು ಕಳೆದರೂ, ಪ್ರಾದೇಶಿಕ ಅಸಮತೋಲನವನ್ನು ನಾವು ಎಲ್ಲಾ ರಂಗಗಳಲ್ಲೂ ಅನುಭವಿಸುತಿದ್ದೇವೆ. ಇದಕ್ಕೆ ಸರ್ಕಾರಗಳ ಸರಣಿ ನಿರ್ಲಕ್ಷ್ಯ, ಪ್ರಜಾಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ನಾಗರಿಕರ ನಿರಾಭಿಮಾನವೇ ಕಾರಣವಾಗಿದೆ ಎಂದಿರುವ ಅವರು, ಜಿಲ್ಲೆಯಲ್ಲಿ ಗುಣಮಟ್ಟದ ನಾಗರಿಕ ಮೂಲಸೌಕರ್ಯಗಳಿಲ್ಲ. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿಗೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯಾಭಿವೃದ್ದಿ ಕೇಂದ್ರಗಳು ಇಲ್ಲ. ಕಾಲೇಜುಗಳು, ವಿಶ್ವವಿದ್ಯಾಲಯಗಳು ನಾಡಿನ ಪ್ರಗತಿಯ ಸಂಕೇತವಾಗಿದೆ. ಆದರೆ ಕೊಡಗು ಜಿಲ್ಲೆಯ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಕೇವಲ ೧೮% ಆಗಿದ್ದು, ರಾಜ್ಯದಲ್ಲಿ ೨೬ನೇ ಸ್ಥಾನದಲ್ಲಿರುವುದು, ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಪೂರಕ ವ್ಯವಸ್ಥೆಗಳ ಕೊರತೆಗಳು ಎದ್ದು ಕಾಣುತ್ತಿದೆ ಎಂದಿದ್ದಾರೆ.
ಕೊಡಗಿನ ಸಾಂಸ್ಕೃತಿಕ ಅಸ್ಮಿತೆ ಮತ್ತು ಶೈಕ್ಷಣಿಕ ಆಶೋತ್ತರಗಳನ್ನು ಗುರುತಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ೨೦೨೩ ರಲ್ಲಿ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ಒಂದು ಪ್ರಮುಖ ಮೈಲುಗಲ್ಲಾಗಿದೆ. ಪದವಿ, ಸ್ನಾತಕೋತ್ತರ, ಸಂಶೋಧನೆಯ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೌಶಲ್ಯ ತರಬೇತಿಯನ್ನು ಸ್ಥಳೀಯವಾಗಿ ಪಡೆಯಲು ಇದೊಂದು ಐತಿಹಾಸಿಕ ಅವಕಾಶವಾಗಿದೆ. ಮತ್ತೂ ಕೊಡಗಿನ ಸಮುದಾಯ, ಭಾಷೆ, ಇತಿಹಾಸ, ಸಂಸ್ಕೃತಿ, ಪರಂಪರೆ, ಜಾನಪದ ಇತ್ಯಾದಿಗಳನ್ನು ಮತ್ತು ಇಂದಿನ ಅಗತ್ಯಗಳನ್ನು ವಸ್ತುನಿಷ್ಠವಾಗಿ ಇಲ್ಲಿಯೇ ಅಧ್ಯಯನ ಮಾಡಲು ಸುಯೋಗವಾಗಿದೆ ಎಂದು ತಿಳಿಸಿದ್ದಾರೆ.
ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿ, ಅಂತರರಾಷ್ಟೀಯ ದರ್ಜೆಯ ಉನ್ನತ ಶಿಕ್ಷಣದ ಕೇಂದ್ರವನ್ನಾಗಿ ಬೆಳೆಸುವುದು ಕೊಡಗಿನ ಜನಪ್ರತಿನಿಧಿಗಳ, ರಾಜಕೀಯ ಧುರೀಣರ, ಸಂಘ-ಸಂಸ್ಥೆಗಳ, ಸಾಮಾನ್ಯ ನಾಗರಿಕರ ಗುರುತರ ಜವಾಬ್ದಾರಿಯಾಗಿದೆ. ಪ್ರಜ್ಞಾವಂತ ನಾಗರಿಕರು ಸ್ವಾಭಿಮಾನದಿಂದ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಮ್ಮ ಸಾಂವಿಧಾನಿಕ ಹಕ್ಕನ್ನು, ನಮ್ಮ ಸ್ವಾಭಾವಿಕ ಪಾಲನ್ನು ಒಕ್ಕೊರಲಿನಿಂದ ಜನಾಂದೋಲನದ ಮೂಲಕ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.