ಹಳೆಯ ವಿದ್ಯಾರ್ಥಿಗಳ ಸಮ್ಮಿಲನ

Alumni Association
Published on

ಕುಶಾಲನಗರ:

ನಾಲ್ಕಾಣಿ - ಎಂಟಾಣಿ   ಹೊಂದಿಸಿಕೊಂಡು  ಖಾಸಗಿ ಬಸ್ ನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ  ಸವಿನೆನಪು, ಶಾಲಾವರಣದಲ್ಲಿ ಸಪೋಟ ಹಣ್ಣುಗಳನ್ನು ಕದ್ದು ತಿಂದು ಬೀಜಗಳನ್ನು ಹುಡುಗಿಯರಿಗೆ ಕಾಣದಂತೆ ಎಸೆಯುತ್ತಿದ್ದ ನೆನಪು, ಹೋಂ ವರ್ಕ್ ಮಾಡದೇ ಕನ್ನಡ ಪಂಡಿತರಿಂದ ಪೆಟ್ಟು ತಿಂದ ಬಗೆ, ಶಾಲೆಗೆ ರಜೆ ಇದ್ದಾಗ  ಶಪಿಸುತ್ತಿದ್ದಿದ್ದು, ಮನೆಯಿಂದ ಬ್ಯಾಗಲ್ಲಿ ತರುವ  ಮಧ್ಯಾಹ್ನದ ಊಟವನ್ನು ಪರಸ್ಪರ ಹಂಚಿ ಸಂತೃಪ್ತಿಯಿಂದ ತಿನ್ನುತ್ತಿದ್ದುದು ಸೇರಿದಂತೆ ಹತ್ತು ಹಲವು ಬಗೆಯ ಸವಿನೆನಪುಗಳ ಮಂಥನಕ್ಕೆ ಹೆಬ್ಬಾಲೆಯ ಪ್ರೌಢಶಾಲಾವರಣ ಭಾನುವಾರ ಸಾಕ್ಷಿಯಾಯಿತು.

1988 ರಿಂದ 1991 ರ ಅವಧಿಯಲ್ಲಿ ಪ್ರೌಢಶಿಕ್ಷಣ ಪೂರೈಸಿದ ನೂರಾರು ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರುವ ಮೂಲಕ ಮುವತ್ತು ವರ್ಷಗಳ ನೆನಪುಗಳನ್ನು ಪುನರ್ಮನನ ಮಾಡಿಕೊಂಡ ಬಗೆ ಇದು.

ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ  ಉದ್ಯಮಿ ಸಿದ್ದಲಿಂಗಪುರದ ಮುತ್ತಪ್ಪ ಹಾಗೂ ಮುದ್ದಪ್ಪ ಅವಳಿ ಸೋದರರ ಪ್ರಯತ್ನದಿಂದಾಗಿ  ನಡೆದ ಸ್ನೇಹ ಸಮ್ಮಿಲನದಲ್ಲಿ ಜಿಲ್ಲೆಯ ಮೂಲೆ ಮೂಲೆಯಷ್ಟೇ ಅಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ  ಇದ್ದಂತಹ ಹಳೆಯ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದರು.

ಶಾಲೆಯ ಆ ಕಾಲದ ಈ ವಿದ್ಯಾರ್ಥಿಗಳ ಬ್ಯಾಚಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಕ್ಷೇತ್ರವನ್ನು  ಆಯ್ಕೆ ಮಾಡಕೊಂಡವರಿದ್ದರೆ, ಉಳಿದ ಕೆಲವು ಮಂದಿ ಸೇನೆಯಲ್ಲಿ, ಬೆರಳೆಣಿಕೆ ಮಂದಿ ಕ್ರೀಡಾ ಕ್ಷೇತ್ರದಲ್ಲಿ, ಪೊಲೀಸ್ ಇಲಾಖೆಯಲ್ಲಿ, ವಾಣಿಜ್ಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಇದ್ದವರೂ ಇದ್ದರು.

ಈ ಪೈಕಿ ಹಲವರು ತಮ್ಮ ಪರಿಚಯ ಮಾಡಿಕೊಳ್ಳುತ್ತಾ ಶಾಲೆಯಲ್ಲಿ ತಾವು ಕಲಿಯುವಾಗ ಇದ್ದಂತಹ ಶಾಲಾ ಗುರುಗಳನ್ನು ನೆನೆದರು. ಶಾಲೆಯಲ್ಲಿ ಆ ದಿನಗಳಲ್ಲಿ ಆಡಿದ ತುಂಟಾಟಗಳನ್ನು ನೆನೆದರು. ಪರಸ್ಪರ ಒಬ್ಬರಿಗೊಬ್ಬರು ಕುಶಲೋಪರಿಗೈದರು. ವ್ಯಕ್ತಿಕವಾದ ಕೌಟುಂಬಿಕ ವಿಚಾರಗಳ ವಿನಿಮಯಗೈದರು. ಸ್ನೇಹ ಸಮ್ಮಿಲನದ ಬಳಿಕ ರೆಸಾರ್ಟ್ ಒಂದರಲ್ಲಿ ಆಯೋಜಿಸಿದ್ದ ಮನರಂಜನಾ ಕೂಟದಲ್ಲಿ ಸೇರ್ಪಡೆಗೊಂಡು ಬಗೆ ಬಗೆಯ ಭಕ್ಷ್ಯಗಳ ಸವಿದರು‌. ನಂತರ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net