

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಾಧ್ಯಮ ಕ್ಷೇತ್ರ ವಿಸ್ತಾರಗೊಂಡ ನಂತರ ಸೃಷ್ಟಿಯಾದ ಮಹತ್ವದ ಔದ್ಯೋಗಿಕ ಅವಕಾಶ ಸದುಪಯೋಗಿಸಿಕೊಂಡು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಎಸ್‌ಡಿಎಂ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿದ್ಯಾರ್ಥಿಗಳು ಹೆಗ್ಗುರುತು ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.
ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ, ಸಂಶೋಧನಾ ವಿಭಾಗ ಮಾ.15ರಂದು ಹಮ್ಮಿಕೊಂಡಿದ್ದ ಅಲ್ಯುಮ್ನಿ ಮೀಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂತರ ಪ್ರಾಯೋಗಿಕ ಕಲಿಕೆ, ಸೂಕ್ತ ಮಾರ್ಗದರ್ಶನದ ರೂಪಕವಾಗಿ ಮಾದರಿ ವ್ಯಕ್ತಿತ್ವವುಳ್ಳ ವಿದ್ಯಾರ್ಥಿಗಳು ರೂಪುಗೊಳ್ಳುತ್ತಾರೆ. ಪತ್ರಿಕೋದ್ಯಮ ವಿಭಾಗ ವಿದ್ಯಾರ್ಥಿಗಳ ನಿಲುವು ಆದರ್ಶಪ್ರಾಯವಾಗಿರುತ್ತವೆ. ಅವರ ನಡೆ-ನುಡಿ, ವ್ಯಕ್ತಿತ್ವ ಇತರರಿಗೆ ಮಾದರಿಯಾಗುವಂತೆ ರೂಪಿಸಿದ ಕೀರ್ತಿ ವಿಭಾಗ ಮುಖ್ಯಸ ಡಾ.ಭಾಸ್ಕರ ಹೆಗಡೆ ಅವರಿಗೆ ಸಲ್ಲುತ್ತದೆ. ಹಳೇ ವಿದ್ಯಾರ್ಥಿಗಳೇ ಎಸ್‌ಡಿಎಂ ಶಿಕ್ಷಣ ಸಂಸ್ಥೆ ರಾಯಭಾರಿಗಳು ಎಂದರು.
ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಅಧ್ಯಕ್ಷತೆ ವಹಿಸಿದರು. 2008ರಿಂದ 2024ರವರೆಗೆ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಅಭ್ಯಾಸ ಮಾಡಿದ 200ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮುಖ್ಯಸ್ಥರಾದ ಡಾ.ಭಾಸ್ಕರ್ ಹೆಗ್ಡೆ, ಸುನೀಲ್ ಧರ್ಮಸ್ಥಳ ಉಪಸ್ಥಿತರಿದ್ದರು.