ಹಣವಿದ್ದರೂ ಅಭಿವೃದ್ಧಿ ಭಾಗ್ಯ ಇಲ್ಲ

FotoJet (1)
Published on

ಎನ್​.ಮುನಿವೆಂಕಟೇಗೌಡ ಕೋಲಾರ

ಕೋಲಾರದ ಗಾಂಧಿನಗರದಿಂದ ಗದ್ದೆಕಣ್ಣೂರು ವರೆಗಿನ ರಸ್ತೆ ನಿಮಾರ್ಣಕ್ಕೆ ಹಣ ಮಂಜೂರು ಆಗಿದ್ದು, ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ. ಸಾರ್ವಜನಿಕರು ಓಡಾಡಲು ಅನನುಕೂಲವಾಗಿದ್ದು, ಕೂಡಲೇ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡು ಜನರಿಗೆ ಅನುಕೂಲ ಕಲ್ಪಿಸಬೇಕಿದೆ.

ಗಾಂಧಿನಗರದಿಂದ ಗದ್ದೆಕಣ್ಣೂರು ಮಾರ್ಗವಾಗಿ ಕೂತಂಡಹಳ್ಳಿ, ವರದೇನಹಳ್ಳಿ ಸೇರಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಪ್ರತಿದಿನ ನೂರಾರು ವಾಹನಗಳು ಸದರಿ ರಸ್ತೆಯಲ್ಲಿ ಓಡಾಡುತ್ತಿವೆ. ಹಾಗೂ ರೈತರ ಜಮೀನುಗಳಿಗೆ ಮತ್ತು ತೋಟಗಳಿಗೆ ಹೋಗುವ ಸಂಪರ್ಕ ರಸ್ತೆ ಇದಾಗಿದ್ದು, ಸುಮಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದು, ರಾತ್ರಿ ವೇಳೆ ಓಡಾಡುವ ದ್ವಿಚಕ್ರವಾಹನ ಸವಾರಗಾರರು ಹಳ್ಳಗಳಲ್ಲಿ ಬಿದ್ದು, ಕೈಕಾಲು ಮುರಿದುಕೊಂಡ ನಿದರ್ಶನಗಳಿವೆ. ರಸ್ತೆ ಅಭಿವೃದ್ಧಿಪಡಿಸಲು ಅನೇಕ ಬಾರಿ ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತಕ್ಕೆ ಮತ್ತು ಶಾಸಕರಿಗೆ ಮನವಿ ಮಾಡಿದರೂ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗಾಂಧಿನಗರದ ಹೊರ ವಲಯ ಇತ್ತೀಚೆಗೆ ಅಭಿವೃದ್ಧಿ ಆಗುತ್ತಿದ್ದು, ರೈತರು ತೋಟಗಳಲ್ಲಿ ಮನೆಗಳನ್ನು ನಿಮಾರ್ಣ ಮಾಡಿಕೊಳ್ಳುತ್ತಿದ್ದಾರೆ. ಬಡಾವಣೆಗಳು ನಿಮಾರ್ಣವಾಗುತ್ತಿದ್ದು, ಒಂಟಿ ಮನೆಗಳಿಗೆ ಹೋಗಲು ರಸ್ತೆ ಮತ್ತು ವಿದ್ಯುತ್​ ದೀಪಗಳು ಇಲ್ಲದಂತಾಗಿದೆ. ರಾತ್ರಿ ಕುಡುಕರ ಕಾಟವೂ ಹೆಚ್ಚಾಗಿದ್ದು, ಗದ್ದೆಕಣ್ಣೂರು, ಕೂತಂಡಹಳ್ಳಿ ಗ್ರಾಮಗಳಿಗೆ ಬಸ್​ ವ್ಯವಸ್ಥೆ ಇಲ್ಲದ ಕಾರಣ ಸದರಿ ರಸ್ತೆಯಲ್ಲಿಯೇ ದ್ವಿಚಕ್ರ ವಾಹನ ಮತ್ತು ಆಟೋಗಳಲ್ಲಿ ಸಂಚರಿಸಲು ಹಿಂದೆ ಮುಂದೆ ನೋಡುವ ದುಸ್ಥಿತಿ ಎದುರಾಗಿದೆ.

ರಸ್ತೆ ನಿಮಾರ್ಣಕ್ಕೆ ಶಾಸಕರ ಅನುದಾನದಲ್ಲಿ ಹಣ ಬಿಡುಗಡೆಯಾಗಿದ್ದು, ಇನ್ನೂ ರಸ್ತೆ ಕಾಮಗಾರಿ ಪ್ರಾರಂಭಗೊಂಡಿಲ್ಲ. ಶಾಸಕರು ಆಶ್ವಾಸನೆ ಕೊಟ್ಟು 2 ತಿಂಗಳಾಯಿತು. ನಿತ್ಯ ರಸ್ತೆಯಲ್ಲಿ ಸಂಚರಿಸುವವರು ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ರಸ್ತೆ ನಿಮಾರ್ಣ ಆಗುತ್ತದೆಯೋ ಇಲ್ಲ ಎಂಬ ಅನುಮಾನ ಕಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ರಸ್ತೆ ನಿಮಾರ್ಣಕ್ಕೆ 3 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಟೆಂಡರ್​ ಕಾಮಗಾರಿ ಮುಗಿದಿದ್ದು, ಕಾರ್ಯಾದೇಶ ನೀಡಬೇಕಾಗಿದೆ. ಕಾಮಗಾರಿ ಪ್ರಾರಂಭಿಸಲು ಭೂಮಿಪೂಜೆಗಾಗಿ ಶಾಸಕರಿಗಾಗಿ ಕಾಯಲಾಗುತ್ತಿದೆ. ಸಂಕ್ರಾಂತಿ ಹಬ್ಬದ ದಿನವೇ ಕಾಮಗಾರಿಗೆ ಚಾಲನೆ ನೀಡಲಾಗುವುದು."

 -ಮಂಜುನಾಥ್​

ಎಇಇ ಲೋಕೋಪಯೋಗಿ ಇಲಾಖೆ, ಕೋಲಾರ

"ಗಾಂಧಿನಗರದ ಆಂಜನೇಯಸ್ವಾಮಿ ದೇವಸ್ಥಾನದಿಂದ ಹಿಡಿದು ಗದ್ದೆಕಣ್ಣೂರು ತನಕ ರಸ್ತೆ ನಿಮಾರ್ಣ ಆಗಲಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಗಾಂಧಿನಗರಕ್ಕೆ ಒಳಪಡುವ ರಸ್ತೆಯುದ್ದಕ್ಕೂ ವಿದ್ಯುತ್​ ದೀಪ ಅಳವಡಿಸಲಾಗಿದೆ. ಮುಂದಿನ ಭಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಗಾಂಧಿನಗರ ಅಕ್ಕಪಕ್ಕ ಇರುವ ಒಂಟಿ ಮನೆಗಳ ಬಳಿಯೂ ವಿದ್ಯುತ್​ ದೀಪ ಅಳವಡಿಸಲಾಗಿದೆ."

-ಪ್ರವಿಣ್​ಗೌಡ

ನಗರಸಭಾ ಸದಸ್ಯ, ಗಾಂಧಿನಗರ ವಾರ್ಡ್​

"ಕಳೆದ 10 ವರ್ಷಗಳಿಂದ ಗಾಂಧಿನಗರದಿಂದ ಗದ್ದೆಕಣ್ಣೂರಿಗೆ ಹೋಗುವ ರಸ್ತೆ ಅಭಿವೃದ್ಧಿಯಾಗದೆ ಹಳ್ಳಗಳಲ್ಲಿಯೇ ಓಡಾಡುವಂತಾಗಿದೆ. ಶಾಸಕರು ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದುವರೆವಿಗೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ರಸ್ತೆ ಅಭಿವೃದ್ಧಿಯ ಜತೆಗೆ ನಗರಸಭೆಯವರು ಮತ್ತು ಗ್ರಾಪಂನವರು ಸೇರಿ ವಿದ್ಯುತ್​ ದೀಪಗಳನ್ನು ಅಳವಡಿಸಬೇಕು. ನರಸಾಪುರದ ಬಳಿಯ ಕಾರ್ಖಾನೆಗಳಿದ್ದು, ರಾತ್ರಿ ಪಾಳಿಯಲ್ಲಿರುವವರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದು, ದೀಪಗಳ ಅಳವಡಿಕೆ ಅನಿವಾರ್ಯವಾಗಿದೆ."

- ಆಟೋ ನಾರಾಯಣಸ್ವಾಮಿ

ಗಾಂಧಿನಗರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net