ಅನುದಾನವಿದ್ದರೂ ಆರಂಭವಾಗದ ರಸ್ತೆ ಕಾಮಗಾರಿ

8 HATTI 01
ಹಿರೇನಗನೂರು ಗ್ರಾಮದ ರಸ್ತೆ ಕೆಸರು ಗದ್ದೆಯಂತಾಗಿರುವುದು.
Published on

ಹಟ್ಟಿಚಿನ್ನದಗಣಿ: ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ತಗ್ಗು-ಗುಂಡಿಗಳು ಬಿದ್ದಿದ್ದು, ವಾಹನ ಸವಾರರು, ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.

ಸಮೀಪದ ವೀರಾಪುರ ಕ್ರಾಸ್‌ನಿಂದ ಆನ್ವರಿ ಗ್ರಾಮದವರೆಗೆ 10 ಕೋಟಿ ರೂ.ವೆಚ್ಚದಲ್ಲಿ 7 ಕಿಮೀ ಡಾಂಬರಿಕರಣ ರಸ್ತೆ ಮಾಡಬೇಕಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ರಾಜಕೀಯ ಕಿತ್ತಾಟದಿಂದ ನನೆಗುದಿಗೆ ಬಿದ್ದಿದ್ದು, ಗ್ರಾಮೀಣ ಭಾಗದ ಜನರು ಗುಂಡಿಬಿದ್ದ ರಸ್ತೆಯಲ್ಲಿಯೇ ಸಂಚಾರ ಮಾಡುವ ಸ್ಥಿತಿ ಇದೆ.

ಹಟ್ಟಿ ಪಟ್ಟಣದಿಂದ ಹಲವು ಹಳ್ಳಿಗಳಿಗೆ ವೀರಾಪುರ-ಆನ್ವರಿ ರಸ್ತೆಯ ಸಂಪರ್ಕ ಮಾರ್ಗಗಳಾಗಿದ್ದು, ಸಂಪೂರ್ಣ ಹಾಳಾಗಿ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದು ಗಾಯಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಶಾಲೆ-ಕಾಲೇಜು ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ತುರ್ತು ಸೇವೆಗೆ ಹೋಗುವ ರೋಗಿಗಳು ಪರದಾಡುವಂತಾಗಿದೆ. ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ. ಮಂಜೂರಾಗಿದ್ದರೂ, ರಸ್ತೆ ಕಾಮಗಾರಿ ಆರಂಭವಾಗದಿರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ಜನಪ್ರತಿನಿಧಿಗಳು ಮತ ಕೇಳುವಾಗ ಮಾತ್ರ ರಸ್ತೆ ವಿಚಾರ ಮಾತನಾಡುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಗುಂಡಿ ಬಿದ್ದ ರಸ್ತೆಯಲ್ಲಿಯೇ ಸಂಚಾರ ಮಾಡುವುದು ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾಂಬರ್ ರಸ್ತೆ ಮಾಡಲು ಮಂಜೂರಾದ 10 ಕೋಟಿ ರೂ. ಏನಾಯಿತು? ವೀರಾಪುರ ಕ್ರಾಸ್‌ನಿಂದ ಆನ್ವರಿ ಗ್ರಾಮಕೆ ರಸ್ತೆ ಮಾಡದಂತೆ ರಾಜಕೀಯ ಪಿತೂರಿ ನಡೆದಿದೆ. ಗ್ರಾಮಸ್ಥರು ಹೋರಾಟ ನಡೆಸುವ ಮುನ್ನ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ವಿಘ್ನೇಶ ಹಿರೇನಗನೂರು ಗ್ರಾಮಸ್ಥ ಅನುಬಂಧ ಇ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಾಗಿದೆ. ಕೆಲ ತಾಂತ್ರಿಕ ದೋಷದಿಂದ ರಸ್ತೆ ಕಾಮಗಾರಿ ವಿಳಂಬವಾಗಿದೆ. ರಸ್ತೆ ಕಾಮಗಾರಿ ಆರಂಭಿಸಿ ಗ್ರಾಮೀಣರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಬಸ್ತಾನೆಪ್ಪ ಜೆಇ, ಪಿಡಬ್ಲ್ಯುಡಿ, ಲಿಂಗಸಗೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net