

ವಿಜಯವಾಣಿ ಸುದ್ದಿಜಾಲ ಕುಣಿಗಲ್
ಪುರಸಭೆಯ 7ನೇ ವಾರ್ಡ್ನ ಅನ್ಸರ್ ಪಾಷಾ ಪುರಸಭೆ ಸದಸ್ಯ ಎಂದು ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರವೂ ಗೆಜೆಟ್ ನೋಟಿಪಿಕೇಷನ್ ಮಾಡಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಆದೇಶ ಅನುಷ್ಠಾನ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಆರೋಪಿಸಿದರು.
7ನೇ ವಾರ್ಡ್ನ ಸದಸ್ಯರಾಗಿದ್ದ ಸಮೀವುಲ್ಲಾ ಸುಳ್ಳು ದಾಖಲಾತಿ ನೀಡಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕುರಿತು ಜೆಡಿಎಸ್ನ ಸಮೀಪ ಸ್ವರ್ಧಿ ಅನ್ಸರ್ ಪಾಷಾ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ&ಪ್ರತಿವಾದ ಆಲಿಸಿದ ನ್ಯಾಯಾಲಯ ಅನ್ಸರ್ ಪಾಷಾ ಪುರಸಭೆ ಸದಸ್ಯರೆಂದು ಆದೇಶ ನೀಡಿದೆ. ಆದರೂ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಸದಸ್ಯರೆಂದು ಘೋಷಣೆ ಮಾಡಿಲ್ಲ ಎಂದು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು. ಇದರ ನಡುವೆ ಸಮೀವುಲ್ಲಾ ಹೈಕೋರ್ಟ್ ಮೇಲ್ಮನವಿ ಹಾಕಿದ್ದರು. ಅಲ್ಲಿಯೂ ಅನ್ಸರ್ ಪಾಷಾ ಅವರೇ ಸದಸ್ಯರೆಂದು ಕೋರ್ಟ್ ಆದೇಶ ನೀಡಿದೆ.
ಸರ್ಕಾರವೂ ಗೆಜೆಟ್ ನೋಟಿಪಿಕೇಷನ್ ಮಾಡಿದೆ. ಈ ಆದೇಶ ಆಗಿ ಒಂದು ತಿಂಗಳು ಕಳೆದರೂ ಅನ್ಸರ್ ಪಾಷಾ ಅವರನ್ನು ಸದಸ್ಯರೆಂದು ಅಧಿಕಾರಿಗಳು ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳ ಈ ವರ್ತನೆಗೆ ಶಾಸಕ ಡಾ.ರಂಗನಾಥ್ ಕಾರಣ. ತಾಲೂಕಿನ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಆರೋಪಿಸಿದರು.
ಪುರಸಭೆ ಸದಸ್ಯರಾದ ಶ್ರೀನಿವಾಸ್, ಅನ್ಸರ್ ಪಾಷಾ, ಮಾಜಿ ಸದಸ್ಯ ಇ.ಮಂಜು, ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಮುಖಂಡರಾದ ರಂಗಸ್ವಾಮಿ, ನಾಗರಾಜು, ಮಂಜಣ್ಣ, ಜಗದೀಶ್, ವಕ್ತಾರ ತರೀಕೆರೆ ಪ್ರಕಾಶ್ ಇದ್ದರು.