ಮಿಮ್ಸ್‌ನಲ್ಲಿ ಪರ್ಯಾಯ ಆಹಾರ ವ್ಯವಸ್ಥೆ: ಟೆಂಡರ್ ಕೊಡಲು ಸರ್ಕಾರಕ್ಕೆ ಪ್ರಸ್ತಾವನೆ

Alternative food system in Mims Mandya
Published on

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಆಹಾರ ವಿತರಣೆಯಲ್ಲಿ ಗುಣಮಟ್ಟ ಕಳಪೆ ಎನ್ನುವ ಆರೋಪ ಕೇಳಿಬಂದ ಬೆನ್ನಲ್ಲೇ ಪರ್ಯಾಯ ವ್ಯವಸ್ಥೆ ಆಡಳಿತ ಮಂಡಳಿ ಮುಂದಾಗಿದೆ. ಅದರಂತೆ ಮಿಮ್ಸ್‌ಗೆ ಆಹಾರ ಪೂರೈಸುವುದನ್ನು ಟೆಂಡರ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳಿಗೆ ಸರ್ಕಾರದಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಅ.22ರಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹಾಗೂ ಸದಸ್ಯರು ಮಿಮ್ಸ್‌ಗೆ ಭೇಟಿ ಕೊಟ್ಟು ಆಹಾರ ವ್ಯವಸ್ಥೆ ಪರಿಶೀಲಿಸಿದರು. ಈ ಸಮಯದಲ್ಲಿ ಸಾಕಷ್ಟು ಆರೋಪ ಕೇಳಿಬಂದವು. ಮುಖ್ಯವಾಗಿ ಕಳಪೆ ಗುಣಮಟ್ಟದ ಬ್ರೇಡ್ ಮತ್ತು ಹಾಲು, ಅನ್ನ ಹಾಗೂ ಸಾಂಬಾರು ವಿತರಣೆ ಮಾಡಲಾಗುತ್ತಿದೆ ಎಂದು ರೋಗಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ಆಯೋಗ ಮಿಮ್ಸ್ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿತ್ತು. ಅದರಂತೆ ಇದೀಗ ಆಹಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಮಿಮ್ಸ್ ಯೋಜನೆ ರೂಪಿಸಿದೆ.

ಮಿಮ್ಸ್‌ನ ಯೋಜನೆ ಏನು?: ಹಾಸನ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗಳಿಗೆ ಆಹಾರ ನೀಡಲು ಪರ್ಯಾಯ ವ್ಯವಸ್ಥೆ ಇದೆ. ಅದೆಂದರೆ ರೋಗಿಗಳಿಗೆ ಮೂರು ಹೊತ್ತು ಊಟವನ್ನು ಪೂರೈಕೆ ಮಾಡಲು ಹೊರಗಿನವರಿಗೆ ಟೆಂಡರ್ ನೀಡಲಾಗಿದೆ. ಅದರಂತೆ ಹಲವು ವರ್ಷದಿಂದ ಈ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ಮಿಮ್ಸ್‌ನಲ್ಲಿ ಆಹಾರ ಪದಾರ್ಥವನ್ನು ಪೂರೈಕೆ ಮಾಡಿಸಿಕೊಂಡು ಅಡುಗೆ ಮಾಡಿ ಕೊಡುವ ಪದ್ಧತಿಯೇ ಇತ್ತು. ಈ ನಡುವೆಯೂ ಹೊರಗಿನವರಿಗೆ ಟೆಂಡರ್ ಕೊಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಂಬಂಧ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಯಾವುದೇ ಉತ್ತರ ಬಾರದ ಕಾರಣ ಹಳೇ ಪದ್ಧತಿ ಮುಂದುವರೆಯುತ್ತಿತ್ತು. ಈಗ ಆಹಾರ ಆಯೋಗದ ದಾಳಿ ಬಳಿಕ ನಡೆದ ಬೆಳವಣಿಗೆಯ ಪರಿಣಾಮ ಟೆಂಡರ್‌ಕೊಡುವ ಪ್ರಸ್ತಾವನೆ ಮುಂದುವರೆಸಿ ಅನುಷ್ಠಾನಗೊಳಿಸಲು ಆಡಳಿತ ಮಂಡಳಿ ಮುಂದಾಗಿದೆ.

ಪ್ರತಿದಿನಕ್ಕೆ 150 ರೂ ನಿಗದಿ

ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುವವರಿಗೆ ಊಟಕ್ಕೆಂದು ಪ್ರತಿದಿನಕ್ಕೆ 150 ರೂ ನಿಗದಿಪಡಿಸಿ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತಿದೆ. ಆದ್ದರಿಂದ ಈ ಮೊತ್ತದಲ್ಲಿ ಬೆಳಗ್ಗೆ ತಿಂಡಿ ಹಾಗೂ ಎರಡು ಹೊತ್ತು ಊಟ, ಸಂಜೆ ಉಪಾಹಾರ ಕೊಡಬೇಕಿದೆ.

ಈ ಹಿನ್ನೆಲೆಯಲ್ಲಿ ಪ್ರತಿದಿನವೂ ವಿಭಿನ್ನವಾದ ತಿಂಡಿ, ಊಟ, ಉಪಾಹಾರ ಪೂರೈಕೆ ಮಾಡಲು ಟೆಂಡರ್ ಆಹ್ವಾನಿಸಲಾಗುತ್ತಿದೆ. ರಾಜ್ಯದ ಯಾವುದೇ ಜಿಲ್ಲೆಯ ವ್ಯಕ್ತಿಯಾದರೂ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿರಲಿದೆ. ಸಾಧ್ಯವಾದಷ್ಟು ತ್ವರಿತವಾಗಿ ಪ್ರಕ್ರಿಯೆ ಮುಗಿಸಿ ಊಟ ಪೂರೈಕೆ ಟೆಂಡರ್‌ಕೊಡಲು ಮಿಮ್ಸ್ ಆಡಳಿತ ಮಂಡಳಿ ಯೋಜನೆ ರೂಪಿಸಿದೆ.

ಇದಲ್ಲದೆ ಟೆಂಡರ್‌ಕೊಡುವ ಮುನ್ನವೇ ಮೆನು ಏನಿರಬೇಕೆನ್ನುವುದನ್ನು ಸ್ಪಷ್ಟಪಡಿಸುವುದರ ಜತೆಗೆ ಪ್ರತಿದಿನವೂ ಆಹಾರದ ಪರಿಶೀಲನೆ ನಡೆಯುವ ವಿಚಾರವನ್ನು ತಿಳಿಸಲಾಗುತ್ತದೆ. ಈ ಪ್ರಕ್ರಿಯೆಯ ಮಾರ್ಗದರ್ಶನ ಪ್ರತಿದಿನವೂ ನಡೆಯಲಿದೆ.

ವಿತರಣೆಯಲ್ಲೇ ದೊಡ್ಡ ಲೋಪ

ಮಿಮ್ಸ್‌ನಲ್ಲಿ ಅಡುಗೆ ಮಾಡುವ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಮೂರ‌್ನಾಲ್ಕು ತಿಂಗಳ ಹಿಂದಷ್ಟೇ ನಿವೃತ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಡಿ ಗ್ರೂಪ್ ಸಿಬ್ಬಂದಿಯನ್ನು ಅಡುಗೆ ಮಾಡಲು ಬಳಸಿಕೊಳ್ಳಲಾಗುತಿತ್ತು ಎಂದು ತಿಳಿದುಬಂದಿದೆ. ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆಹಾರ ವಿತರಣೆಯಲ್ಲಿಯೇ ಲೋಪ ಕಂಡುಬಂದಿರುವುದು.

ಆಯೋಗ ಭೇಟಿ ಕೊಟ್ಟ ಸಮಯದಲ್ಲಿ ರೋಗಿಗಳ ಬಳಿಗೆ ಹೋಗಿ ಮಾಹಿತಿ ಕೇಳಿದಾಗ ಕೆಲ ಸತ್ಯಾಂಶ ಹೊರಬಿತ್ತು. ಸತ್ವವಿಲ್ಲದ ಆಹಾರ ಕೊಡುತ್ತಾರೆ. ರುಚಿಯೂ ಇರುವುದಿಲ್ಲ ಎನ್ನುವುದು ಒಂದೆಡೆಯಾದರೆ, ಸಮರ್ಪಕವಾಗಿ ಆಹಾರ ವಿತರಣೆಯಾಗುವುದಿಲ್ಲ ಎನ್ನುವುದಾಗಿದೆ. ಮಿಮ್ಸ್‌ನಲ್ಲಿ 500ಕ್ಕೂ ಹೆಚ್ಚು ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಸಿದ್ಧಪಡಿಸುವ ಊಟ 150 ರಿಂದ 200 ಜನರಿಗೆ ಮಾತ್ರ ಎನ್ನುವ ಗಂಭೀರ ಆರೋಪವಿದೆ. ಇದಲ್ಲದೆ ರೋಗಿಗಳಿಗೆ ಅನ್ನ ಹಾಗೂ ಸಾಂಬಾರನ್ನು ಸರಿಯಾಗಿ ಕೊಡುವುದಿಲ್ಲ. ಕಾಟಾಚಾರಕ್ಕೆ ಒಂದಷ್ಟು ರೋಗಿಗಳಿಗೆ ಕೊಟ್ಟು ಹೊರಡುತ್ತಾರೆನ್ನುವುದಿದೆ.

ಇದಲ್ಲದೆ ಹಾಲು ಮತ್ತು ಬ್ರೇಡ್ ಕೊಡುವ ವಿಚಾರದಲ್ಲಿಯೂ ನಿರ್ಲಕ್ಷೃವಿದೆ. ರೋಗಿಗಳಿಗೆ ಹಾಲು ಮತ್ತು ಬ್ರೇಡ್ ಬೇಕೆ ಎಂದು ಕಿಟಕಿಯಲ್ಲಿಯೇ ಕೇಳಿ ಸುಮ್ಮನೆ ಹೊರಟು ಹೋಗುವ ಪರಿಪಾಟವಿದೆ. ಇದಕ್ಕೆ ಪೂರಕವೆನ್ನುವಂತೆ ಆಯೋಗ ಭೇಟಿ ಕೊಟ್ಟ ವೇಳೆ ಪ್ರತಿನಿತ್ಯ ಎಷ್ಟು ಜನರಿಗೆ ಆಹಾರ ವಿತರಣೆ ಎಂದು ಸಿಬ್ಬಂದಿಯನ್ನು ಕೇಳಿದಾಗ ಅವರಿಂದ ಸಮರ್ಪಕ ಉತ್ತರವೇ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತಿರುವ ಆಡಳಿತ ಮಂಡಳಿ, ಅರ್ಹರಿಗೆ ಆಹಾರ ಸಮರ್ಪಕವಾಗಿ ವಿತರಣೆಯಾಗುವಂತೆಯೂ ಕ್ರಮ ವಹಿಸಬೇಕಿದೆ.

ಆಹಾರ ವ್ಯವಸ್ಥೆಯನ್ನು ಬದಲಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಪ್ರಸ್ತುತ ಮಿಮ್ಸ್‌ನಲ್ಲಿಯೇ ಅಡುಗೆ ಮಾಡಲಾಗುತ್ತಿದೆ. ಇದನ್ನು ರದ್ದುಪಡಿಸಿ ಗುಣಮಟ್ಟದಿಂದ ಕೂಡಿರುವ ಮೂರು ಹೊತ್ತಿನ ಊಟ ಹಾಗೂ ಸಂಜೆ ಸ್ನಾಕ್ಸ್ ಪೂರೈಕೆ ಮಾಡಲು ಟೆಂಡರ್ ಕೊಡಲಾಗುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಸಾಧ್ಯವಾದಷ್ಟು ಬೇಗ ಹೊಸ ವ್ಯವಸ್ಥೆ ಅನುಷ್ಠಾನವಾಗಲಿದೆ. ಡಾ.ನರಸಿಂಹಸ್ವಾಮಿ ಮಿಮ್ಸ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net