

ಬೂದಿಕೋಟೆ: ಬಂಗಾರಪೇಟೆ ತಾಲೂಕು ಬೂದಿಕೋಟೆ ಗ್ರಾಮದ ಗಂಗರ ಕಾಲದ ಶ್ರೀ ಸೋಮೇಶ್ವರ ದೇವಾಲಯದ ಬಳಿ ನಿಧಿಗಾಗಿ ಬಲಿಪೀಠ ಹಾಗೂ ಧ್ವಜ ಸ್ತಂಭವನ್ನು ಶಿವರಾತ್ರಿ ದಿನವೇ ಕಿಡಿಗೇಡಿಗಳು ದ್ವಂಸ ಮಾಡಿದ್ದಾರೆ.
ಗಂಗರ ಕಾಲದ ಶ್ರೀಸೋಮೇಶ್ವರ ದೇವಾಲಯ ಸುವಾರು 1,300 ವರ್ಷಗಳ ಇತಿಹಾಸ ಹೊಂದಿದ್ದು, ಗಂಗರು ಕೋಲಾರವನ್ನು ರಾಜಧಾನಿಯನ್ನಾಗಿ ವಾಡಿಕೊಂಡು ಆಳ್ವಿಕೆ ವಾಡುತ್ತಿದ್ದ ವೇಳೆ ಬೂದಿಕೋಟೆ ಗ್ರಾಮದಲ್ಲಿ ಮೊದಲ ಬಾರಿಗೆ ಸೋಮೇಶ್ವರ ದೇವಾಲಯ ನಿರ್ಮಿಸಿದ್ದರು ಎಂದು ಪೂರ್ವಿಕರು ಹೇಳುತ್ತಾರೆ. ಈ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗಂಗರು ಹಾಗೂ ಇತರ ರಾಜವಂಶಸ್ಥರು ನಿಧಿಯನ್ನು ಭೂಮಿಯಲ್ಲಿ ಮುಚ್ಚಿ ಇಟ್ಟಿದ್ದರು ಎಂಬ ಪ್ರತೀತಿ ಇದೆ. ಇದನ್ನೇ ನಂಬಿರುವ ಕೆಲವರು ದೇವಾಲಯ ಪ್ರಾಂಗಣದ ಬಲಿಪೀಠ ಮತ್ತು ಧ್ವಜಸ್ತಂಭವನ್ನು ಮಹಾಶಿವರಾತ್ರಿಯ ದಿನವೇ ಕೆಡವಿದ್ದಾರೆ. ದೇವಾಲಯದ ಅರ್ಚಕರು ಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬೂದಿಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಕೃತ್ಯ ಇದೇ ಮೊದಲಲ್ಲ: ದೇವಾಲಯದ ಬಳಿ ನಿಧಿಗಾಗಿ ಶೋಧ ವಾಡಿರುವುದು ಇದೇ ಮೊದಲಲ್ಲ. ಈಗಾಲಲೇ ಎರಡು ಬಾರಿ ಪ್ರಯತ್ನಿಸಿದ್ದು, ಒಮ್ಮೆ ಗರ್ಭಗುಡಿಯ ಶಿವಲಿಂಗವನ್ನೇ ಕೆಡವಿದ್ದರು. ಗ್ರಾಮಸ್ಥರು ಮತ್ತೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರು. ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ವಾರಕೊಮ್ಮೆ ಪೂಜೆ, ಪುನಸ್ಕಾರಗಳು ನೆರವೇರುತ್ತವೆ. ದೇಗುಲ ಗ್ರಾಮದ ಹೊರಗೆ ಇರುವುದರಿಂದ ವಿದ್ಯುತ್ ಸಂಪರ್ಕ ಸೇರಿ ಇತರ ಸೌಕರ್ಯಗಳು ಇಲ್ಲದ ಕಾರಣ ಆಗಾಗ ನಿಧಿಶೋಧ ಸೇರಿ ಇತರ ಕೃತ್ಯಗಳು ಸಾಮಾನ್ಯವಾಗಿವೆ ಎನ್ನಲಾಗಿದೆ.