ಬಫರ್ ಝೋನ್‌ನಲ್ಲೂ ಬಡಾವಣೆ

Also located in the buffer zone
Published on

ಮಡಿಕೇರಿ:

ಕೊಡಗಿನಲ್ಲಿ ಮಳೆಗಾಲದಲ್ಲಿ ಪ್ರವಾಹ ಎಂದ ಕೂಡಲೇ ಕುಶಾಲನಗರ ನೆನಪಿಗೆ ಬರುವಂತಾಗಿದೆ. ಜೀವನದಿ ಕಾವೇರಿ ಇಲ್ಲಿ ನಗರದ ಮೂರು ಭಾಗಗಳಲ್ಲಿ ಸುತ್ತುವರಿದು ಹರಿಯುವುದರಿಂದ ನದಿ ತೀರದ ಬಡಾವಣೆಗಳಿಗೆ ನೀರು ನುಗ್ಗುವುದು ಸಾಮಾನ್ಯ. ಆದರೂ ಇಂಥ ಪ್ರದೇಶದಲ್ಲೇ ವರ್ಷದಿಂದ ವರ್ಷಕ್ಕೆ ಮನೆಗಳು, ವಾಣಿಜ್ಯ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನದಿ ತೀರದ ಬಫರ್ ಝೋನ್‌ಗಳ ತಂಟೆಗೆ ಹೋಗದಿದ್ದರೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ.

ಕುಶಾಲನಗರ ಪುರಸಭೆ ವ್ಯಾಪ್ತಿಗೆ ಒಳಪಡುವ ಎಂಜಿನಿಯರಿAಗ್ ಕಾಲೇಜಿನಿಂದ ಮುಳ್ಳುಸೋಗೆ ತನಕ ವ್ಯಾಪಿಸಿರುವ ಯೋಗಾನಂದ ಬಡಾವಣೆ, ಇಂದಿರಾ ಬಡಾವಣೆ, ಅಯ್ಯಪ್ಪಸ್ವಾಮಿ ದೇವಾಲಯ, ದಂಡಿನಪೇಟೆ, ಎಪಿಎಂಸಿ, ಸಿಂಗಾರಮ್ಮ ಬಡಾವಣೆ, ಶೈಲಜಾ ಬಡಾವಣೆ, ರಸೂಲ್ ಬಡಾವಣೆ, ವಿವೇಕಾನಂದ ಬಡಾವಣೆ, ಮಾರುಕಟ್ಟೆ, ಆದಿಶಂಕರಾಚಾರ್ಯ ಬಡಾವಣೆ, ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಬಿದ್ದಪ್ಪ ಲೇಔಟ್ ಹೀಗೆ ಕುಶಾಲನಗರದಲ್ಲಿ ನದಿ ತೀರದ ಉದ್ದಕ್ಕೂ ಬಡಾವಣೆಗಳು ತಲೆ ಎತ್ತಿವೆ. ಇವುಗಳಲ್ಲಿ ಬಹುತೇಕ ಬಡಾವಣೆಗಳು ಅಧಿಕೃತ ಎನ್ನುವುದೂ ವಿಶೇಷ.

೨೦೧೮ರಲ್ಲಿ ಜಿಲ್ಲೆಯಲ್ಲಿ ಸುರಿದ ಕುಂಭದ್ರೋಣ ಮಳೆಯ ಸಂದರ್ಭ ಕಾವೇರಿ ನದಿ ಪ್ರವಾಹದ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇದಕ್ಕೂ ಮೊದಲು ದಶಕಗಳ ಹಿಂದೆ ಇಷ್ಟೇ ಪ್ರಮಾಣದಲ್ಲಿ ಮಳೆ ಸುರಿದು ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಆದರೆ ಆ ಸಮಯದಲ್ಲಿ ನದಿ ಪಾತ್ರದಲ್ಲಿ ಬಡಾವಣೆಗಳು ಇರಲಿಲ್ಲ. ಭತ್ತದ ಗದ್ದೆಗಳು, ಹೊಲಗಳು ಇದ್ದವು. ಹಾಗಾಗಿ ಪ್ರವಾಹದ ಬಿಸಿ ಜನರಿಗೆ ತಟ್ಟಿರಲಿಲ್ಲ. ಆದರೆ ಬಫರ್ ಝೋನ್ ಕೂಡ ಬಿಡದೇ ಬಡಾವಣೆಗಳು ರೂಪುಗೊಂಡು ಮನೆಗಳು ತಲೆ ಎತ್ತುತ್ತಿದ್ದಂತೆಯೇ ನದಿ ತೀರದ ಬಡಾವಣೆಗಳು ಪ್ರವಾಹಪೀಡಿತ ಪ್ರದೇಶಗಳಾಗಿ ಬದಲಾದವು.
೨೦೧೮ರಲ್ಲಿ ಕಾವೇರಿ ನದಿ ತನ್ನ ಗಡಿಯನ್ನು ಗುರುತಿಸಿ ಹೋಗಿತ್ತು. ೨೦೧೯ರಲ್ಲೂ ಪ್ರವಾಹ ಮರುಕಳಿಸಿತು.

ಈ ಸಂದರ್ಭದಲ್ಲೂ ನದಿ ತನ್ನ ಸರಹದ್ದಿನ ಸೂಚನೆ ಕೊಟ್ಟಿತ್ತು. ನಂತರ ೨೦೨೦ರಲ್ಲಿ ಇದೇ ಪರಿಸ್ಥಿತಿ ಪುನರಾವರ್ತನೆಆಯಿತು. ಆದರೂ ಎಚ್ಚೆತ್ತುಕೊಳ್ಳಬೇಕಾದವರು ಎಚ್ಚೆತ್ತುಕೊಳ್ಳಲೇ ಇಲ್ಲ. ನಂತರದ ದಿನಗಳಲ್ಲೂ ಈ ಬಡಾವಣೆಗಳು ಕ್ರಿಯಾಶೀಲವಾದವು. ಪ್ರವಾಹ ಬಂದು ಹೋದರೂ ಬುದ್ಧಿ ಕಲಿಯದವರು ಖಾಲಿ ಬಿದ್ದಿದ್ದ ಸೈಟ್‌ಗಳಲ್ಲಿ ಮನೆ ಕಟ್ಟಿಸಿದರು. ಮತ್ತೆ ಕೆಲವರು ಸೈಟ್‌ಗಳನ್ನು ಮಾರಿದರು. ಮನೆಗಳ ಮಾರಾಟವೂ ನಡೆಯಿತು. ಪೆಟ್ರೋಲ್ ಬಂಕ್ ರೀತಿಯ ವಾಣಿಜ್ಯ ನಿರ್ಮಾಣಗಳೂ ತಲೆ ಎತ್ತಿದವು. ಈಗಲೂ ಇಂಥ ಜಾಗದಲ್ಲಿ ಬೃಹತ್ ಕಟ್ಟಡ ಕಾಮಗಾರಿ ನಡೆಯುತ್ತಿರುವುದು ಕಾಣಬಹುದು.
ಇಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳೂ ಅಧಿಕೃತ ಎನ್ನುವುದು ಹಲವು ಅಚ್ಚರಿಗಳಲ್ಲಿ ಒಂದು. ಕುಶಾಲನಗರ ಸರ್ಕಾರಿ ಆಸ್ಪತ್ರೆ ಬಳಿಯ ಬಡಾವಣೆ ಒಂದರಲ್ಲಿ ೨೦೧೮ರಲ್ಲಿ ಕೂಡಿಗೆ ರಸ್ತೆ ತನಕವೂ ಕಾವೇರಿ ನದಿ ಪ್ರವಾಹದ ನೀರು ಬಂದಿತ್ತು. ಆದರೆ ಈಗ ಅದೇ ಜಾಗದಲ್ಲಿ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸುತ್ತಿದೆ. ೨೦೧೮, ೨೦೧೯ರಲ್ಲಿ ಮುಳುಗಡೆ ಆಗಿದ್ದ ಜಾಗದಲ್ಲಿ ಬೃಹತ್ ಕಟ್ಟಡವೊಂದು ತಲೆ ಎತ್ತುತ್ತಿದೆ. ಇದು ಕೇವಲ ಉದಾಹರಣೆ ಮಾತ್ರ. ಇಂಥ ಹಲವು ನಿರ್ಮಾಣಗಳು ೨೦೧೮ರ ನಂತರವೂ ‘ಪ್ರವಾಹ ಪೀಡಿತ’ ಪ್ರದೇಶಗಳಲ್ಲಿ ಆಗಿದೆ.

೨೦೧೮ಕ್ಕಿಂತಲೂ ಮೊದಲು ನದಿ ತೀರದಲ್ಲಿ ಸೈಟ್ ಖರೀದಿಸಿದವರು, ಮನೆ ಕಟ್ಟಿಸಿಕೊಂಡವರು, ಭೂಮಿ ಮೇಲೆ ಹೂಡಿಕೆ ಮಾಡಿದವರರಿಗೆ ಅರಿವಿನ ಕೊರತೆ ಇತ್ತು ಎನ್ನುವ ಕಾರಣಕ್ಕೆ ಅವರು ಅನುಕಂಪಕ್ಕೆ ಅರ್ಹರು ಎಂದು ಪರಿಗಣಿಸಬಹುದು. ಆದರೆ ಮಳೆಗಾಲದಲ್ಲಿ ಪ್ರವಾಹದ ನೀರು ಬರುತ್ತದೆ ಎಂದು ಗೊತ್ತಿದ್ದೂ ಅಲ್ಲಿ ಸೈಟ್ ಖರೀದಿ, ಬೃಹತ್ ನಿರ್ಮಾಣಗಳಂಥ ಚಟುವಟಿಕೆ ನಡೆಸಿದವರನ್ನೂ ಈ ಗುಂಪಿಗೆ ಸೇರಿಸಬಹುದಾ ? ಎನ್ನುವುದು ಸದ್ಯದ ಪ್ರಶ್ನೆ.
ಅನಾಹುತದ ಎಲ್ಲಾ ಸಾಧ್ಯತೆಯ ಅರಿವಿದ್ದು ಬಫರ್ ಝೋನ್‌ಗಳಲ್ಲಿ ಹಣ ಹಾಕಿ ಭೂಮಿ ಖರೀದಿಸಿ ಮನೆ, ಕಟ್ಟಡ, ವಾಣಿಜ್ಯ ಉದ್ದೇಶಕ್ಕೆ ಹೂಡಿಕೆ ಮಾಡಿದ ಹೂಡಿಕೆದಾರರು, ಮಳೆಗಾಲದಲ್ಲಿ ಇಲ್ಲಿ ಉಂಟಾಗುವ ಪ್ರವಾಹದ ಬಗ್ಗೆ ಮಾಹಿತಿ ಇದ್ದು ನಿರ್ಮಾಣ ಕಾಮಗಾರಿಗಳಿಗೆ ನಿರಕ್ಷೇಪಣಾ ಪತ್ರ ಕೊಟ್ಟ ಅಧಿಕಾರಿಗಳು, ಯೋಜನೆಗಳಿಗೆ ಒಪ್ಪಿಗೆಯ ಮುದ್ರೆ ಒತ್ತಿದ ಅಧಿಕಾರಿಗಳು, ಕಾಮಗಾರಿ ನಡೆಸಲು ಅನುಮತಿ ಕೊಟ್ಟ ಅಧಿಕಾರಿಗಳು ಎಲ್ಲರೂ ತಪ್ಪ ಮಾಡಿದವರೇ ಆಗಿರುವಾಗ ಇವರಿಗೆಲ್ಲಾ ಶಿಕ್ಷೆಯ ಬದಲು ಸರ್ಕಾರದಿಂದ ಪರಿಹಾರ ಕೊಡಿಸವುದು ಎಷ್ಟು ಸರಿ ? ಎನ್ನುವ ಚರ್ಚೆಗಳೂ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

ಕೆಲವು ಮಧ್ಯವರ್ತಿಗಳು, ಧನದಾಹಿ ಅಧಿಕಾರಿಗಳ ಕೂಟ ಈ ವಿಷ ವರ್ತುಲದಲ್ಲಿ ಅಮಾಯಕರನ್ನು ಸಿಲುಕಿಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿಬರುತ್ತಿದೆ. ಭೂಮಿಗೆ ಅಧಿಕ ಬೇಡಿಕೆ ಇರುವ ಕುಶಾಲನಗರದಲ್ಲಿ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಸೈಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಕೊನೆಗೆ ಪ್ರವಾಹದಂಥ ಪರಿಸ್ಥಿತಿ ನಿರ್ಮಾಣ ಆದಾಗ ಈ ಮಧ್ಯವರ್ತಿ, ಅಧಿಕಾರಿಗಳ ಕೂಟ ಜನಪ್ರತಿನಿಧಿಗಳನ್ನು, ಹಿರಿಯ ಅಧಿಕಾರಿಗಳನ್ನು ಇಲ್ಲಿಗೆ ಭೇಟಿ ನೀಡುವಂತೆ ಮಾಡಿ ಪರಿಹಾರದ ಭರವಸೆ ಕೊಡಿಸುವಲ್ಲೂ ಯಶಸ್ವಿ ಆಗುತ್ತಿದ್ದಾರೆ. ಪ್ರತೀ ವರ್ಷವೂ ಇದು ಪುನರಾವರ್ತನೆ ಆಗುತ್ತಿದ್ದು, ಶಾಶ್ವತ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ.

ಮತ್ತೊಂದು ಕಡೆ ನದಿ ನೀರು ಹೀಗೆ ಜನವಸತಿ ಪ್ರದೇಶಗಳಿಗೆ ನುಗ್ಗಲು ಅಣೆಕಟ್ಟೆಗಳೂ ಕಾರಣ ಎನ್ನುವ ವಾದ ಕೇಳಿಬರುತ್ತಿದೆ. ಅಣೆಕಟ್ಟೆಗಳು ಕಟ್ಟುವುದರಿಂದ ನದಿಯಲ್ಲಿನ ಮರಳಿನ ಹರಿವಿಗೆ ತಡೆಯಾಗುತ್ತದೆ. ಅಣೆಕಟ್ಟೆಯ ಹಿಂಭಾಗದಲ್ಲಿ ಮರಳು ಹೂಳಿನ ರೂಪದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ಚಿಕ್ಕ ಮಳೆಗೂ ನದಿಗಳಲ್ಲಿ ನೀರು ಉಕ್ಕೇರುತ್ತದೆ. ನದಿ ತೀರದ ಪ್ರದೇಶಗಳಿಗೆ ನುಗ್ಗಿ ಪ್ರವಾಹಕ್ಕೆ ಕಾರಣವಾಗುತ್ತದೆ. ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ಹೂಳೆತ್ತುವ ಕೆಲಸ ಆಗಬೇಕು ಎನ್ನುವ ಅಭಿಪ್ರಾಯಗಳೂ ತಜ್ಞರಿಂದ ವ್ಯಕ್ತವಾಗುತ್ತಿದೆ.

ನದಿಯ ಬಫರ್ ಝೋನ್ ಸರಿಯಾಗಿ ಗುರುತಿಸಬೇಕು. ನದಿ ಮಧ್ಯೆ ಅಥವಾ ನದಿ ದಡದಿಂದ ಎಷ್ಟು ದೂರದಲ್ಲಿ ನಿರ್ಮಾಣಗಳಾಗಬೇಕು ಎನ್ನುವುದನ್ನು ಕಂದಾಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಕಾನೂನು ಏನಿದೆಯೋ ಅದನ್ನು ಸ್ಪಷ್ಟವಾಗಿ ಪಾಲಿಸಬೇಕು. ಈ ವಿಷಯದಲ್ಲಿ ಈ ಮೊದಲು ಏನಾಗಿತ್ತೋ ಅದು ನನಗೆ ಗೊತ್ತಿಲ್ಲ. ಇನ್ನು ಮುಂದೆ ನನ್ನ ಅವಧಿಯಲ್ಲಿ ಇಂಥವು ನಡೆಯಬಾರದು. ನದಿಯಲ್ಲಿ ಹೂಳೆತ್ತುವ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಅಣೆಕಟ್ಟೆಗಳನ್ನು ಕಟ್ಟದೇ ಇದ್ದಿದ್ದರೆ ಮರಳು, ಕಲ್ಲು, ಮಣ್ಣು ಪ್ರತಿ ವರ್ಷವೂ ಸರಾಗವಾಗಿ ಹರಿದು ಸಮುದ್ರ ಸೇರುತ್ತಿತ್ತು. ಈಗ ಅದು ಅಲ್ಲಲ್ಲಿ ನಿಂತು ನದಿಯ ಕೆಳ ಹರಿವನ್ನು ಕಡಿಮೆ ಮಾಡಿ ದಡಕ್ಕೆ ಬಂದಿರುವುದರಿAದ ಪ್ರವಾಹ ಉಂಟು ಮಾಡುತ್ತದೆ. ೨೦೧೮, ೨೦೧೯ರಲ್ಲಿ ಕೆಳ ಸರಿದು ಬಂದ ಮಣ್ಣಿನ ರಾಶಿ ಈಗ ನದಿ ತೊರೆಗಳಲ್ಲಿ ತುಂಬಿದೆ. ಒಂದು ಶತಮಾನದ ಹೂಳು ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿದೆ. ಇದನ್ನೆಲ್ಲಾ ಯಾರು ತೆಗೆಯುತ್ತಾರೆ ? ಯಾವಾಗ ತೆಗೆಯುತ್ತಾರೆ ? ಎನ್ನುವ ಪ್ರಶ್ನೆ ಈಗ ಮಾತ್ರ ನೆನಪಿಗೆ ಬಂದು ಮಳೆಗಾಲ ಮುಗಿದ ಮೇಲೆ ಮರೆಯಾಗುತ್ತದೆ.
ಡಾ. ಹೆಚ್.ಎಸ್.ಎಂ. ಪ್ರಕಾಶ್, ಹಿರಿಯ ಭೂ ವಿಜ್ಞಾನಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net