

ಕೂಡ್ಲಿಗಿ: ಆರೋಗ್ಯವಂತ ಶಿಶುವಿನಿಂದ ಸ್ವಸ್ಥ ಸಮಾಜ ಕಟ್ಟಬಹುದು. ಹಾಗಾಗಿ, ಮಕ್ಕಳಿಗೆ ಪೌಷ್ಟಿಕ ಆಹಾರ ತಪ್ಪದೆ ನೀಡಬೇಕು ಎಂದು ಸಹಾಯಕ ಸರ್ಕಾರಿ ಅಭಿಯೋಜಕಿ ವೈ.ಶಿಲ್ಪಾ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಗುರುವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸಿಡಿಪಿಒ ಕಚೇರಿಯಿಂದ ಏರ್ಪಡಿಸಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಹಾಗೂ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿದತ್ತವಾಗಿ ಬೆಳೆದ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರಲಿದ್ದು, ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಪ್ಯಾನಲ್ ವಕೀಲ ಕರಿಬಸವರಾಜ, ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಮಾತನಾಡಿದರು. ಅಪರ ಸರ್ಕಾರಿ ವಕೀಲ ಕೆ.ಜಿ.ಶಿವ ಪ್ರಸಾದ್, ಪ್ರಭಾರ ಸಿಡಿಪಿಒ ವಿಜಯಲಕ್ಷ್ಮೀ, ವಕೀಲರಾದ ಸಿ.ವಿರೂಪಾಕ್ಷಪ್ಪ, ಅಂಗಡಿ ರವಿ, ಬಿ.ಸಿದ್ದಲಿಂಗಪ್ಪ ಇತರರಿದ್ದರು.