

ಮೈಸೂರು: ಪ್ರತಿ ಕ್ಷಣವೂ ಸ್ಪರ್ಧಾತ್ಮಕವಾಗಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನ ಪಡೆದುಕೊಳ್ಳುವುದು ಮುಖ್ಯ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಸಿದ್ಧಾರ್ಥನಗರ ಜೆಎಸ್‌ಎಸ್ ಪಬ್ಲಿಕ್ ಶಾಲೆಯಿಂದ ಜೆಎಸ್‌ಎಸ್ ಆಸ್ಪತ್ರೆ ಆವರಣದಲ್ಲಿರುವ ಡಾ.ಶ್ರೀರಾಜೇಂದ್ರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪಬ್ಲಿಕ್ ಶಾಲೆಗಳ ಅಂತರ ಶಾಲಾ ರಸಪ್ರಶ್ನೆ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜ್ಞಾನ ಎಂದರೆ ಕೇವಲ ಪುಸ್ತಕದಿಂದ ಮಾತ್ರ ಪಡೆಯುವುದಲ್ಲ. ಪುಸ್ತಕ ಜತೆಗೆ ಸಮಾಜದಲ್ಲಿನ ಅಗು, ಹೋಗುಗಳು ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳುವುದು ಮುಖ್ಯ. ರಸಪ್ರಶ್ನೆಯಲ್ಲಿ ಭಾಗವಹಿಸುವುದೂ ಒಂದು ಕಲಿಕಾ ಪ್ರಕ್ರಿಯೆಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಒಂದು ತರಗತಿಯಲ್ಲಿ ಕುಳಿತು ಪಡೆಯುವುದಕ್ಕಿಂತ ಇಂತಹ ಕಾರ್ಯಕ್ರಮಗಳ ಮೂಲಕ ಇತರರೊಡನೆ ವಿಚಾರ ವಿನಿಮಯ ಮಾಡಿಕೊಳ್ಳುವುದರಿಂದ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಘಟನೆಗಳು, ರಾಜ್ಯ, ದೇಶ ಹಾಗೂ ಪ್ರಪಂಚದ ವಿವಿಧೆಡೆ ನಡೆಯುತ್ತಿರುವ ಸಾಮಾಜಿಕ, ವಿಜ್ಞಾನ, ತಾಂತ್ರಿಕ , ಸಾಂಸ್ಕೃತಿಕ, ರಾಜಕೀಯ ಮುಂತಾದ ಅನೆಕ ವಿಚಾರಗಳ ಬಗ್ಗೆ ಅರಿಯಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ವೃತ್ತ ಪತ್ರಿಕೆಗಳು, ಗ್ರಂಥಾಲಯಗಳು ಜ್ಞಾನ ವೃದ್ಧಿಗೆ ಸಹಕಾರಿಯಾಗಿವೆ. ಆದರೆ ಇಂದಿನ ಮೊಬೈಲ್, ಟಿವಿ ಯುಗದಲ್ಲಿ ಅವುಗಳನ್ನು ಮಕ್ಕಳು ಕೇವಲ ಜ್ಞಾನ ಸಂಪಾದನೆಗೋಸ್ಕರ ಉಪಯೋಗವಾಗುವಂತೆ ನೋಡಿಕೊಳ್ಳುವುದು ಪಾಲಕರ ಜವಾಬ್ದಾರಿಯಾಗಿರುತ್ತದೆ ಎಂದರು.
ಪತ್ರಕರ್ತೆ ರಶ್ಮಿ ಕೋಟಿ ಮಾತನಾಡಿ, ರೋಚಕತೆಯನ್ನೊಳಗೊಂಡ ಇಂತಹ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಎಂದರೆ ಜ್ಞಾನದ ಅನ್ವೇಷಣೆಯಾಗಿರುತ್ತದೆ. ಹಾಗೆಯೇ ಇದು ಒಂದು ರೀತಿಯಲ್ಲಿ ಕಲಿಕೆಯ ಸಂತೋಷ ಕೂಟವೂ ಆಗಿದೆ ಎಂದರು.
ರಸಪ್ರಶ್ನೆ ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಆಲೋಚನೆ, ಕಲಿಯುವಿಕೆಯ ಉತ್ಸಾಹ, ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಅಗಿರುತ್ತವೆ. ಸ್ಪರ್ಧೆಯಲ್ಲಿ ಗೆಲುವೊಂದೇ ಮುಖ್ಯವಲ್ಲ. ಬದಲಾಗಿ ಹೊಸ ಸ್ನೇಹಿತರಿಂದ ತಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳುವದರತ್ತ ಗಮನಹರಿಸಿ ಎಂದರು.
ಸಿದ್ಧಾರ್ಥನಗರ ಜೆಎಸ್‌ಎಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಬಿ.ಲತಾ, ಉಪ ಪ್ರಾಂಶುಪಾಲ ಎಸ್.ಎಲ್.ನಾಗೇಂದ್ರ ಇತರರು ಇದ್ದರು. ನಗರ ಸೇರಿದಂತೆ ಜಿಲ್ಲೆಯ 19 ವಿವಿಧ ಪಬ್ಲಿಕ್ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್ (ಪ್ರಥಮ), ಜಯಲಕ್ಷ್ಮೀಪುರಂ ಸೇಂಟ್ ಜೋಸೆಫ್ ಶಾಲೆ (ದ್ವಿತೀಯ) ಹಾಗೂ ಜೆ.ಪಿ.ನಗರ ಜೆಎಸ್‌ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು (ತೃತೀಯ) ಬಹುಮಾತ ಗಳಿಸಿದರು.