

ಕಳಸ: ಹೊರನಾಡಿನ ರೋಟರಿ ಸೇವಾದಳದ ಆಶ್ರಯದಲ್ಲಿ ಹೊರನಾಡಿನಲ್ಲಿ ನಡೆದ ಹಾಸ್ಯ ಯಕ್ಷೋತ್ಸವದಲ್ಲಿ ಪ್ರಶಸ್ತಿ ವಿಜೇತರನ್ನು ಸನ್ಮಾನಿಸುವ ಜತೆಗೆ ಅಶಕ್ತರನ್ನು ಆಧರಿಸುವ ಕೆಲಸವೂ ನಡೆಯಿತು. ಮೊದಲಿಗೆ ಹಾಸ್ಯಕಲಾವಿದ ಮೈಸೂರು ಆನಂದ ಅವರಿಂದ ಹಾಸ್ಯಸಂಜೆ ನಡೆಯಿತು. ನಂತರ ನಡೆದ ಸಭೆಯಲ್ಲಿ ಹೊರನಾಡಿನ 10 ರೋಗಿಗಳಿಗೆ ತಲಾ 5 ಸಾವಿರ ರೂ. ನಗದು ವಿತರಿಸಲಾಯಿತು.
ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಹೊರನಾಡಿನ ರೋಟರಿ ಸೇವಾದಳವು ಸಮಾಜಮುಖಿ ಚಟುವಟಿಕೆ ಜತೆ ಸಾಂಸ್ಕೃತಿಕವಾಗಿಯೂ ತನ್ನ ಛಾಪು ಮೂಡಿಸುತ್ತಿದೆ. ಹಳುವಳ್ಳಿಯ ಯಕ್ಷಗಾನ ಕಲಾವಿದೆ ಜ್ಯೋತಿ ದೀರ್ಘ ಕಾಲದಿಂದ ಶ್ರಮವಹಿಸಿ ಕಲೆಗೆ ಸೇವೆ ಸಲ್ಲಿಸಿದ್ದಾರೆ.ಅವರಿಗೆ ಸಂದ ಯಕ್ಷಸಿರಿ ಪ್ರಶಸ್ತಿಯಿಂದ ಆ ಪ್ರಶಸ್ತಿಗೆ ಗೌರವ ಬಂದಿದೆ ಎಂದರು.
ಸಹಕಾರ ರತ್ನ ಪ್ರಶಸ್ತಿ ವಿಜೇತ ಜಿ.ಕೆ.ಮಂಜಪ್ಪಯ್ಯ ಮತ್ತು ಯಕ್ಷ ಸಿರಿ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದೆ, ಯಕ್ಷಗುರು ಜ್ಯೋತಿ ಅವರನ್ನು ಸನ್ಮಾನಿಸಲಾಯಿತು. ಬ್ರಹ್ಮಾವರದ ಮೆಕ್ಕೆಕಟ್ಟು ಮೇಳದ ಕಲಾವಿದರು ಪ್ರಶ್ನಾರ್ಥಕ ಎಂಬ ಹಾಸ್ಯ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು.
ಮುಖಂಡರಾದ ಶ್ರೇಣಿಕ, ರಾಜೇಂದ್ರ ಪ್ರಸಾದ್, ಶ್ರೀಕಾಂತ್ ಕೆಳಭಾಗ, ಬ್ರಹ್ಮದೇವ, ರವಿ ರೈ, ಕೆ.ಆರ್.ಪ್ರಭಾಕರ್, ಕೆ.ಕೆ.ಬಾಲಕೃಷ್ಣಭಟ್, ರೋಟರಿ ಸಮುದಾಯ ದಳದ ಅಧ್ಯಕ್ಷ ಸಂತೋಷ, ದ್ವಾರಕಾನಾಥ್ ಇದ್ದರು.