ಕ್ರೀಡೆ ಜತೆಗೆ ಅಧ್ಯಯನಕ್ಕೂ ಗಮನಹರಿಸಿ: ಅಂಕಿತಾ ಸುರೇಶ್

25adarshkdga1
Published on

ಮಡಿಕೇರಿ: ವಿದ್ಯಾರ್ಥಿಗಳು ಕ್ರೀಡೆ ಜತೆಗೆ ಅಧ್ಯಯನಕ್ಕೂ ಗಮನಹರಿಸಬೇಕು ಎಂದು ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರು ಹಾಗೂ ವ್ಯವಸ್ಥಾಪಕಿ ಅಂಕಿತಾ ಸುರೇಶ್ ಕಿವಿಮಾತು ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಫೆಸ್ಟ್ ’ಸಮನ್ವಯ’ದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಶೈಕ್ಷಣಿಕ ಬೌದ್ದಿಕ ಸಾಮರ್ಥ್ಯದ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪಾಠ ಪ್ರವಚನಗಳ ಬಗ್ಗೆಯೂ ಹೆಚ್ಚು ಗಮನಹರಿಸಿದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಸಿ.ಜಗತ್ ತಿಮ್ಮಯ್ಯ, ಈಗಾಗಲೇ ಕಾರ್ಯಪ್ಪ ಕಾಲೇಜಿನಲ್ಲಿ ಇಂಗ್ಲಿಷ್, ಅರ್ಥಶಾಸ್ತ್ರ, ವಾಣಿಜ್ಯ, ಎಂಬಿಎ ಟ್ರಾವಲ್ ಎಂಡ್ ಟೂರಿಸಂ, ಯೋಗ ವಿಜ್ಞಾನ, ಭೌತಶಾಸ್ತ್ರ, ಕೊಡವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪ್ರಚಲಿತದಲ್ಲಿದೆ. ಕೊಡಗಿನ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.


ಮುಂಬರುವ ದಿನಗಳಲ್ಲಿ ಕೊಡಗು ವಿಶ್ವವಿದ್ಯಾಲಯ ಆಗುವ ಸಾಧ್ಯತೆ ಇದೆ. ಆದ್ದರಿಂದ ಮತ್ತಷ್ಟು ಹೊಸ ವಿಷಯಗಳನ್ನು ಪರಿಚಯಿಸಲಾಗುತ್ತದೆ. ದೂರದ ಕಾರಣದಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೂ ಈ ಕಾಲೇಜು ಅನುಕೂಲವಾಗಲಿದೆ ಎಂದರು.


ಸೋಲು ಗೆಲುವಿಗಿಂತ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲಾಗಿ ಪರಿಣಮಿಸಿರುವುದನ್ನು ಐಎಎಸ್, ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿಗಳಾದವರನ್ನು ಗಮನಿಸಿದರೆ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.


ಮೈಸೂರು ಕಾಲೇಜು ಚಾಂಪಿಯನ್: ಮೈಸೂರಿನ ಸೇಪಿಯೆಂಟ್ ಕಾಲೇಜು ಸವಾರ್ಂಗೀಣ ವಿನ್ನರ್ ಆಗಿ ಹೊರಹೊಮ್ಮಿತು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಿಸಿಎ ವಿಭಾಗ ರನ್ನರ್ಸ್ ಸ್ಥಾನ ಪಡೆಯಿತು. ಮೈಸೂರು, ಹಾಸನ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ೧೫ ಕಾಲೇಜುಗಳಿಂದ ೪೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಎಂಬಿಎ (ಟಿಟಿ) ವಿಭಾಗದ ಸಂಯೋಜಕಿ ಡಾ.ಗಾಯತ್ರಿ ದೇವಿ, ಇಂಗ್ಲಿಷ್ ಪ್ರಾಧ್ಯಾಪಕರು ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ಡಾ.ನಯನ ಕಶ್ಯಪ್, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರಾದ ಯಕ್ಷಿತ್.ಪಿ.ಎಲ್, ದೇಚಮ್ಮ.ಕೆ.ಪಿ, ಪೊನ್ನಣ್ಣ.ಕೆ.ಪಿ, ರಾಹುಲ್.ಎಂ.ಆರ್, ಶಶಾಂಕ್.ಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net