ವಿಜ್ಞಾನದ ಜತೆಗೆ ಆಧ್ಯಾತ್ಮವು ಅಗತ್ಯ

12MND-1
Published on

ಮಂಡ್ಯ: ಸ್ವಾಮಿ ವಿವೇಕಾನಂದ ಅವರು ಹೇಳಿರುವಂತೆ ಆಧ್ಯಾತ್ಮದಲ್ಲಿ ಜಗದ ಹಿತ ಅಡಗಿದೆ. ಹೀಗಾಗಿ ಯುವಸಮೂಹ ವಿಜ್ಞಾನದ ಜತೆಗೆ ಆಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕಾಲೇಜು ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೆಹರು ಯುವಕೇಂದ್ರದ ಸಹಯೋಗದಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ)ನ ವನರಂಗದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಹಾಗೂ ಯುವ ಸಬಲೀಕರಣ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣ ಮಾಡುವುದಕ್ಕೂ ಮೊದಲು ನಮ್ಮ ಭಾರತವನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆಯಾಗಿತ್ತು. ಆದರೆ, ಚಿಕಾಗೋ ಭಾಷಣ ಜರುಗಿದ ಮೇಲೆ ನಮ್ಮ ದೇಶವನ್ನು ನೋಡುವ ದೃಷ್ಟಿಯೇ ವಿಭಿನ್ನವಾಗಿದೆ. ವಿವೇಕಾನಂದರು ನೀಡಿದ ಚಿಂತನೆ, ಅಧ್ಯಾತ್ಮ ಹಾಗೂ ಅವರು ಕೊಟ್ಟ ಸಂದೇಶವನ್ನು ಇಂದಿಗೂ ನಮ್ಮ ಯುವಕರು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತ ಲ್ಯಾಪ್‌ಟಾಪ್ ಅನ್ನು ಶಾಸಕ ಎಂ.ಶ್ರೀನಿವಾಸ್ ವಿತರಿಸಿದರು. ತಾಪಂ ಅಧ್ಯಕ್ಷೆ ಎಚ್.ಎಸ್.ಶಿವಕುಮಾರಿ, ತಹಸೀಲ್ದಾರ್ ನಾಗೇಶ್, ಪ.ಪೂ.ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಗೀತಾ, ಜಿಲ್ಲಾ ಲೀಡ್ ಕಾಲೇಜು ಪ್ರಾಂಶುಪಾಲ ಪ್ರೆ.ಸಿ.ನಟರಾಜ್, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ನಾರಾಯಣ್ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವ್ಯಕ್ತಿತ್ವ ರೂಪಿಸದ ಶಿಕ್ಷಣ ಶಿಕ್ಷಣವೇ ಅಲ್ಲ: ವ್ಯಕ್ತಿತ್ವ ರೂಪಿಸಿದ ಶಿಕ್ಷಣ ಶಿಕ್ಷಣವೇ ಅಲ್ಲ. ಶಿಕ್ಷಣ ಎಂಬುದು ನೈತಿಕತೆ, ಉತ್ತಮವಾದ ಮೌಲ್ಯ ಹಾಗೂ ಆಧ್ಯಾತ್ಮವನ್ನು ಬೆಳೆಸಿಕೊಡುವುದೇ ಶಿಕ್ಷಣ. ಹೀಗಾಗಿ ಕೇವಲ ಅಂಕಗಳಿಗೋಸ್ಕರ ಓದದೇ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಶಿಕ್ಷಣ ಪಡೆಯಬೇಕು ಎಂದು ವ್ಯಕ್ತಿತ್ವ ಅಭಿವೃದ್ಧಿ ತರಬೇತುದಾರ ಎಸ್.ಬಿ.ಲೀಲಾರಾಣಿ ಜಗದೀಶ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕಲಿಕಾ ಹಂಬಲ ಹಾಗೂ ದಾಹ ವಿದ್ಯಾಥಿಗಳಲ್ಲಿ ಇರಬೇಕು. ನಿಮ್ಮ ಅಭಿವೃದ್ಧಿಗಾಗಿ ನೀವು ಓದಬೇಕು. ಯುವಕರು ಸ್ವಾಮಿ ವಿವೇಕಾನಂದರು ಹೇಳಿದ ನೆಲೆಗಟ್ಟಿನಲ್ಲಿ ಸಾಗಬೇಕೆ ಹೊರತು ದುಶ್ಚಟಗಳಿಗೆ ದಾಸರಾಗಿ ನಿಮ್ಮ ಅಮೂಲ್ಯವಾದ ಬದುಕನ್ನು ನಾಶ ಮಾಡಿಕೊಳ್ಳಬೇಡಿ ಎಂದರು.

ವಿವೇಕಾನಂದರು ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ಹಾಗೂ ಒಂದು ಮಹಾನ್ ಶಕ್ತಿಯಾಗಿ ಎಲ್ಲರಿಗೂ ಯುವ ಚೈತನ್ಯರಾಗಿದ್ದಾರೆ. ರಾಷ್ಟ್ರದ ಯುವಶಕ್ತಿಗಳನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲು ವಿವೇಕನಂದರ ಚಿಂತನೆಗಳಿಂದ ಮಾತ್ರ ಸಾಧ್ಯ. ವಿವೇಕಾನಂದರ ಜಯಂತಿಯಂದು ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ಆಗುತ್ತಿರುವುದು ಸಾರ್ಥಕತೆ ಹಾಗೂ ಸ್ಮರಣೀಯ ಸಂಗತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net