ರಾಜಕಾರಣದ ಜತೆಗೆ ಕ್ರೀಡಾ ಪ್ರೇಮಿಯೂ ಅಗಿದ್ದ ವಿ.ಶ್ರೀನಿವಾಸಪ್ರಸಾದ್

6
Published on

ಮೈಸೂರು: ರಾಜಕಾರಣದ ಜತೆಗೆ ಕ್ರೀಡಾ ಪ್ರೇಮಿಯೂ ಅಗಿದ್ದ ಸಂಸದರಾಗಿದ್ದ ದಿ.ವಿ.ಶ್ರೀನಿವಾಸಪ್ರಸಾದ್ ಅವರ ನಿಧನಕ್ಕೆ ಮೈಸೂರು ಅಥ್ಲೆಟಿಕ್ ಸಂಸ್ಥೆ (ಎಂಡಿಎಎ) ಕ್ರೀಡಾಭಿಮಾನಿಗಳ ಬಳಗದಿಂದ ನಗರದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೈಸೂರು ವಿಶ್ವ ವಿದ್ಯಾಯಲಯದ ಓವೆಲ್ ಮೈದಾನ ಬಳಿ ಇರುವ ಲಯನ್ಸ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು, ಪ್ರಸಾದ್ ಅವರ ಕೊಡುಗೆಯನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಾಮಾನ್ಯವಾಗಿ ರಾಜಕಾರಣಿಗಳು ಕ್ರೀಡೆ ಬಗ್ಗೆ ಆಸಕ್ತಿ ತೋರಿಸುವುದು ಕಡಿಮೆ. ಆದರೆ ಶ್ರೀನಿವಾಸಪ್ರಸಾದ್ ಹಾಗೂ ವಾಸು ಅವರು ನಗರದಲ್ಲಿ ನಡೆಯುವ ಬಹುತೇಕ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹೀಗಾಗಿ ಮೈಸೂರಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು ಎಂದರು.
ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ವೆಂಕಟೇಶ್ ಮಾತನಾಡಿ, ನಮ್ಮ ತಂದೆ ಚಿಕ್ಕವೆಂಕಟಪ್ಪ ಕೂಡ ಮೈಸೂರು ವಿಶ್ವ ವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿದ್ದರು. ನಂತರ ಡಾ.ಸಿ.ಕೃಷ್ಣ ನಿರ್ದೇಶಕರಾದರು. ಆ ಕಾಲದಿಂದಲೂ ಶ್ರೀನಿವಾಸಪ್ರಸಾದ್, ವಾಸು ಅವರು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ಸ್ಮರಿಸಿದರು.
ಮೈಸೂರು ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರೂ ಆದ ಅಂತಾರಾಷ್ಟ್ರೀಯ ಅಥ್ಲೆಟ್ ಎಸ್.ಸೋಮಶೇಖರ್ ಮಾತನಾಡಿ, ವಾಸು ನಮ್ಮ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಅವರಿಗೆ ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಆರಂಭವಾಗಬೇಕು ಎಂಬ ಕನಸಿತ್ತು. ಈ ವಿಚಾರವನ್ನು ವಿಧಾನಸಭೆಯಲ್ಲಿ ಕೂಡ ಪ್ರಸ್ತಾಪ ಮಾಡಿದ್ದರು ಎಂದರು.
ಮುಂಬರುವ ದಿನಗಳಲ್ಲಿ ಇದು ಕಾರ್ಯಗತವಾಗುವಂತೆ ನೋಡಿಕೊಳ್ಳಬೇಕಾಗಿದೆ. ವಿ. ಶ್ರೀನಿವಾಸಪ್ರಸಾದ್ ಕೂಡ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು. ಕ್ರೀಡೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೂ ಬಂದು ಕ್ರೀಡಾಪಟುಗಳನ್ನು ಉತ್ತೇಜಿಸುತ್ತಿದ್ದರು ಎಂದು ಹೇಳಿದರು.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ ಮಾತನಾಡಿ, ನನಗೆ ಶ್ರೀನಿವಾಸಪ್ರಸಾದ್ 1968 ಹಾಗೂ ವಾಸು 1971ರಿಂದಲೂ ಪರಿಚಯ. ಇಬ್ಬರು ಕ್ರೀಡಾಭಿಮಾನಿಗಳು. ಶ್ರೀನಿವಾಸಪ್ರಸಾದ್ ಅವರು ಫುಟ್‌ಬಾಲ್ ಪಟುವಾಗಿದ್ದರು. ಅಶೋಕಪುರಂನಲ್ಲಿ ಇಂದಿಗೂ ನಡೆಯುತ್ತಿರುವ ಸಿದ್ಧಾರ್ಥ ಸ್ಪೋರ್ಟ್ಸ್ ಕ್ಲಬ್ ಸಂಸ್ಥಾಪಕರು. ಕ್ರೀಡಾಕೂಟದಲ್ಲಿ ಹಲವಾರಿಗೆ ಉದ್ಯೋಗ ದೊರೆಯಲು ಕೂಡ ಕಾರಣರಾಗಿದ್ದಾರೆ ಎಂದರು.
ಎಂಡಿಎಎ ಕಾರ್ಯದರ್ಶಿ ಶ್ರೀಕಾಂತ್, ಉಪಾಧ್ಯಕ್ಷರಾದ ಸಿ.ಕೆ.ಮುರಳೀಧರನ್, ಚೆನ್‌ಸಿಂಗ್ ರಾಜಪುರೋಹಿತ್, ಜಂಟಿ ಕಾರ್ಯದರ್ಶಿ ಸಂಪಂಗಿ, ಖಜಾಂಚಿ ಉಮೇಶ್, ಸ್ನಾತಕೋತ್ತರ ಕ್ರೀಡಾ ಮಂಡಳಿಯ ಸಹಾಯಕ ನಿರ್ದೇಶಕ ಟಿ.ಎಸ್.ರವಿ, ತರಬೇತುದಾರ ಪುನೀತ್, ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು, ಅಥ್ಲೆಟಿಕ್ ಶಿಬಿರದಲ್ಲಿ ಭಾಗವಹಿಸಿರುವ ಚಿಣ್ಣರು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net