

ಚನ್ನರಾಯಪಟ್ಟಣ : ಸಸ್ಯೋತ್ಸವ ಅಂಗವಾಗಿ ಸಸಿ ನೆಡುವ ಜತೆಗೆ ಅವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯೂ ಅಗತ್ಯ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಲಂದರ್ ತಿಳಿಸಿದರು.
ಪಟ್ಟಣದ ಟೈಮ್ಸ್ ಪಿಯು ಕಾಲೇಜು ಆವರಣದಲ್ಲಿ ಟೈಮ್ಸ್ ಪಿಯು ಕಾಲೇಜು, ರೋಟರಿ ಕ್ಲಬ್ ಆಫ್ ಚನ್ನರಾಯಪಟ್ಟಣ ವಿಷನ್ ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 2025-26ನೇ ಸಾಲಿನ 10 ಸಾವಿರ ಸಸಿ ವಿತರಣೆ ಮಾಡುವ ಟೈಮ್ಸ್ ಹಸಿರ ಸಿರಿ ಸಸ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಸ್ಯೋತ್ಸವ ಕಾರ್ಯಕ್ರಮದ ಸಸಿಗಳನ್ನು ನೆಪಕ್ಕೆ ಮಾತ್ರ ನೆಟ್ಟು ಬಿಡಲಾಗುತ್ತಿತ್ತು, ಶಾಲೆ, ಸಾರ್ವಜನಿಕ ವಲಯದಲ್ಲಿ ಸಸಿಗಳನ್ನು ನೆಟ್ಟು ಅವುಗಳ ಪ್ರಗತಿ ಕುರಿತು ಫೋಟೊ ಸಮೇತ ವರದಿ ಮಾಡಬೇಕಾದ ಜವಾಬ್ದಾರಿ ಹೊರಬೇಕಾಗುತ್ತದೆ. ಗಿಡಗಳನ್ನು ಪೋಷಿಸುವುದರ ಜತೆಗೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಸಿ ನೆಡುವುದು ಹಾಗೂ ಪೋಷಿಸುವುದು ಕೇವಲ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಕೆಲಸ ಎಂದು ಭಾವಿಸದೆ ಜನಸಾಮಾನ್ಯರು ಪರಿಸರವನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ತೊಡಗಬೇಕು. ನಾವು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಸಿ ಬೆಳೆಸುವುದರ ಜತೆಗೆ ಪರಿಸರದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಬೇಕಾಗಿದೆ. ಇದರಿಂದ ನೆಟ್ಟ ಸಸಿಗಳು ಬೆಳೆಯಲು ಸಹಾಯವಾಗುತ್ತದೆ ಎಂದರು.
ಪ್ರತಿಯೊಬ್ಬ ಮನುಷ್ಯ ನಿತ್ಯ ಕೆಲ ಸಮಯ ಪರಿಸರ ಬೆಳೆಸುವಲ್ಲಿ ನಿರತರಾದಾಗ ಉತ್ತಮ ಆರೋಗ್ಯದ ಜತೆಗೆ ಪರಿಶುದ್ಧ ವಾತಾವರಣ ನಿರ್ಮಿಸಲು ಸಾಧ್ಯವಾಗಲಿದೆ. ಹಾಗಾಗಿ ಪರಿಸರ ಉಳಿಸಿ, ಬೆಳೆಸುವ ಹೊಣೆ ಹೊರಬೇಕಾಗಿದೆ. ಪರಿಸರ ರಕ್ಷಿಸಿದರೆ ಮಾತ್ರ ನಾವು ಆರೋಗ್ಯವಾಗಿ ಬದುಕಲು ಸಾಧ್ಯ. ನಮ್ಮ ಮುಂದಿನ ಪೀಳಿಗೆಗೂ ಅರಣ್ಯ ಬೆಳೆಸಬೇಕು. ಪ್ರತಿಯೊಂದು ಮಗು ತಮ್ಮ ಹಿರಿಯರ ಹೆಸರಿನಲ್ಲಿ ಒಂದೊಂದು ಸಸಿ ನೆಟ್ಟು ಮರವಾಗುವಂತೆ ನೋಡಿಕೊಳ್ಳಬೇಕು. ಗಿಡಗಳನ್ನು ಕಡಿಯುವ ಮನುಷ್ಯರು ಅವುಗಳನ್ನು ಪುನಃ ಬೆಳೆಸುವ ಕಾರ್ಯ ಮಾತ್ರ ಮಾಡುತ್ತಿಲ್ಲ. ಚಿಕ್ಕ ಮಕ್ಕಳಿಗೆ ಆರಂಭದಿಂದಲೇ ಪರಿಸರದ ಬಗ್ಗೆ, ಗಿಡ-ಮರಗಳನ್ನು ಬೆಳೆಸುವುದರ ಬಗೆಗೆ ಅರಿವು ಮೂಡಿಸುವ ಕಾರ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಸರ ಉಳಿಸುವ ಕೆಲಸ ಮಾಡಬಹುದು ಎಂದು ಹೇಳಿದರು.
ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟೈಮ್ಸ್ ಬಿ.ಕೆ.ಗಂಗಾಧರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ 10 ಸಾವಿರ ಸಸಿಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಪ್ರಕೃತಿಯ ಜತೆಗೆ ಒಡನಾಟ ಬೆಳೆಯುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಅನಾದಿಕಾಲದಿಂದ ಮನುಷ್ಯನು ಪರಿಸರದೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡು ಜೀವಿಸುತ್ತಿದ್ದಾನೆ. ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ದೊರೆಯುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಿಡುವುದರ ಜತೆಗೆ ಭೂಮಿ ತಾಯಿ ಪೋಷಣೆಗಾಗಿಒಂದೆರೆಡು ಸಸಿಗಳನ್ನು ನಡೆದು ಮೂಲಕ ಮಕ್ಕಳಿಗೆ ಒಂದೊಳ್ಳೆಯ ಪರಿಸರ ನೀಡಬೇಕು. ಈ ವರ್ಷದಿಂದ ನಾವು ನೀಡಿದ ಸಸಿಗಳು ಎಷ್ಟರ ಮಟ್ಟಿಗೆ ಪೋಷಣೆ ಮಾಡಲಾಗುತ್ತಿದೆ ಎಂದು ಶಾಲಾ ಹಂತದಲ್ಲಿ ಶಿಕ್ಷಕರು ಪರಿಶೀಲಿಸಲಿದ್ದು, ಮಕ್ಕಳನ್ನು ಅಭಿನಂದಿಸುವ ಕೆಲಸ ಮಾಡಲಾಗುವುದು ಎಂದರು.
ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಮಾತನಾಡಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಸಹಾಯಕ ಗವರ್ನರ್ ಜೆ.ಎನ್.ಮಂಜುನಾಥ್, ಗಿರೀಶ್ ಅಡವಿಗೌಡ, ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ ನ ಅಧ್ಯಕ್ಷೆ ಎನ್.ಬಿ. ಜ್ಯೋತಿ ಶ್ರೀನಿವಾಸ್ ಮತ್ತು ಪದಾಧಿಕಾರಿಗಳು, ಟೈಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಸಿ.ಸುನೀಲ್ ಕುಮಾರ್ ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಚ.ನಾ.ಅಶೋಕ್, ಪ್ರಾಧ್ಯಾಪಕ ಶ್ರೀಕಂಠ ಬೋಧಕರು ವಿದ್ಯಾರ್ಥಿಗಳು ಇದ್ದರು.