

ಹೊಳೆನರಸೀಪುರ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುನ್ನಡೆಯಬೇಕಿದೆ ಎಂದು ಸಂಸದ ಶ್ರೇಯಸ್ ಎಂ ಪಟೇಲ್ ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಗುರುವಾರ ಡಾ. ಸರ್ವೆಪಲ್ಲಿ ರಾಧಾ ಕೃಷ್ಣನ್ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹಲವು ಯೋಜನೆಳನ್ನು ಹಮ್ಮಿಕೊಳ್ಳುತ್ತಿದೆ. ಆದರೂ ಮಕ್ಕಳ ಸಂಖ್ಯೆ ಸರ್ಕಾರಿ ಶಾಲೆಗಳಲ್ಲಿ ಕಡಿಮೆ ಆಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳ ಹಾಗೂ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡುವ ಕಡ್ಡಾಯ ಕಾನೂನನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಬೇಕಿದೆ ಎಂದರು.
ಶಿಕ್ಷಣ ರಂಗದಲ್ಲಿ ಶಿಕ್ಷಕರ ಸ್ಥಾನ ಪವಿತ್ರವಾದದ್ದು. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಹಾಗೂ ಸನ್ನಡತೆಯ ಮಾರ್ಗದಲ್ಲಿ ಕರೆದೊಯ್ಯುವ ಹೊಣೆ ಶಿಕ್ಷಕರ ಮೇಲಿದೆ ಎಂದರು.
ಶಿಕ್ಷಕರ ಭವನದ ದುರಸ್ತಿಗೆ ಸಂಸದರ ನಿಧಿಯಿಂದ ಅನುದಾನ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ದುರಸ್ತಿಗೆ ಸರ್ಕಾರದ ಮಟ್ಟದಲ್ಲಿ ಅನುದಾನ ದೊರಕಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಹೋಬಳಿಗೊಂದು ಪಬ್ಲಿಕ್ ಶಾಲೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಡಿ.ರೇವಣ್ಣ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಸುಧಾರಣೆಯಾಗಬೇಕು. 1ನೇ ತರಗತಿಯಿಂದ ಪಿಯುವರೆಗೆ ಉತ್ತಮ ಸೌಲಭ್ಯಗಳನ್ನು ಒಳಗೊಂಡಿರುವ ಪಬ್ಲಿಕ್ ಶಾಲೆಗಳನ್ನು ಹೋಬಳಿಗೆ ಒಂದರಂತೆ ತೆರೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇದೇ ವೇಳೆ ಮೃತ ಶಿಕ್ಷಕರ ಕುಟುಂಬದವರಿಗೆ, ನಿವೃತ್ತ ಶಿಕ್ಷಕರಿಗೆ ಗೌರವಿಸಲಾಯಿತು. ಜತೆಗೆ ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಶಿಕ್ಷಕರು ಬಿಇಒ ಕಚೇರಿಯಿಂದ ಶಿಕ್ಷಕರ ಭವನದವರೆಗೆ ಮೆರವಣಿಗೆ ಮೂಲಕ ಬಂದರು. ಬಿಆರ್‌ಪಿ ಪರಮೇಶ್ ಪ್ರಧಾನ ಭಾಷಣ ಮಾಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಬಿಇಒ ಸೋಮಲಿಂಗೇಗೌಡ, ಪುರಸಭೆ ಅಧ್ಯಕ್ಷ ಕೆ.ಶ್ರೀಧರ್, ಪುರಸಭೆ ಪ್ರಭಾರ ಮುಖ್ಯ ಅಧಿಕಾರಿ ನಾಗೇಂದ್ರ ಕುಮಾರ್, ತಾಪಂ ತಾಂತ್ರಿಕ ಅಧಿಕಾರಿ ಗೋಪಾಲ್, ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಈರಯ್ಯ , ಕಾರ್ಯದರ್ಶಿ ಮಲ್ಲರಾಜೇಗೌಡ, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಎ.ಕಾಳೇಗೌಡ, ಪ್ರಾಂಶುಪಾಲ ದೇವರಾಜು, ನೌಕರ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಶಿಕ್ಷಕರಾದ ಉಮೇಶ್ ಕುಳ್ಳೇಗೌಡ, ಕೃಷ್ಣೇಗೌಡ, ಸೋಮಣ್ಣಯ್ಯ, ಪಿ.ರಾಜು, ಯತೀಶ್, ಮತ್ತಿತರರು ಉಪಸ್ಥಿತರಿದ್ದರು.
ಶಾಸಕ, ಸಂಸದ ಮುಖಾಮುಖಿ: ಶಿಕ್ಷಕರ ಭವನದಲ್ಲಿ ತಾಲೂಕು ಶಿಕ್ಷಕರ ದಿನಾಚರಣೆಯ ಸಮಿತಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ಇದೆ ಮೊದಲ ಬಾರಿಗೆ ಸಂಸದ ಹಾಗೂ ಶಾಸಕರು ಮುಖಾಮುಖಿಯಾಗಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದು ಗಮನ ಸೆಳೆಯಿತು. ಸಂಸದರಾದ ಮೇಲೆ ಶ್ರೇಯಸ್ ಹಾಗೂ ಶಾಸಕ ರೇವಣ್ಣ ಅವರು ತಾಲೂಕಿನ ಯಾವುದೇ ವೇದಿಕೆಯನ್ನು ಹಂಚಿಕೊಂಡಿರಲಿಲ್ಲ.