ಹಕ್ಕು ಕೇಳುವುದರ ಜತೆ ಕರ್ತವ್ಯ ಪಾಲನೆ ಅಗತ್ಯ

15blrp1
ಮಾನವ ಹಕ್ಕುಗಳ ಹೋರಾಟಗಾರರ ಒಕ್ಕೂಟದಿಂದ ಭಾನುವಾರ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪುಟ್ಟಸ್ವಾಮಿಗೌಡ, ರಾಜೇಗೌಡ, ಭಾರತೀಗೌಡ, ಎಂ.ಜಿ.ನಿಂಗರಾಜ್, ಅರುಣ್‌ಕುಮಾರ್ ಇತರರು ಇದ್ದರು.
Published on

ಬೇಲೂರು: ಇನ್ನೊಬ್ಬರ ಹಕ್ಕುಗಳನ್ನು ಗೌರವಿಸಿದಾಗ ಮಾತ್ರ ಮಾನವ ಹಕ್ಕುಗಳನ್ನು ಗೌರವಿಸಿದಂತಾಗುತ್ತದೆ. ಬೇರೆಯವರಿಗೆ ನಾವು ಗೌರವ ನೀಡದೆ, ಎಲ್ಲರೂ ನನಗೆ ಗೌರವ ಕೊಡಬೇಕೆನ್ನುವುದು ಸರಿಯಲ್ಲ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಹೇಳಿದರು.

ಪಟ್ಟಣದ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಮಾನವ ಹಕ್ಕುಗಳ ಹೋರಾಟಗಾರರ ಒಕ್ಕೂಟದಿಂದ ಭಾನುವಾರ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳನ್ನು ಕೇಳುವುದರ ಜತೆಗೆ ಕರ್ತವ್ಯಗಳನ್ನು ಪಾಲಿಸುವತ್ತ ಪ್ರತಿಯೊಬ್ಬರು ಗಮನ ಹರಿಸಬೇಕು. ಹಕ್ಕುಗಳನ್ನು ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಾರದು. ಮುಖ್ಯವಾಗಿ ಉಡುಪು, ಆಹಾರ, ವಸತಿ ನಮ್ಮ ಮೂಲಭೂತ ಹಕ್ಕುಗಳಾಗಿದ್ದು, ಇದಕ್ಕೆ ಚ್ಯುತಿ ಬಂದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೊರಾಟಗಾರರು ಹಕ್ಕುಗಳ ಜತೆಗೆ ಕರ್ತವ್ಯಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಚರಂಡಿಯಲ್ಲಿ ಕಸ ಕಟ್ಟಿಕೊಂಡರೆ ಸ್ವಚ್ಚತೆ ಮಾಡಲು ಅಧಿಕಾರಿಗಳಿಗೆ ತಿಳಿಸುತ್ತೇವೆ. ಆದರೆ ಚರಂಡಿಗೆ ಕಸಹಾಕಿ ಗಲೀಜು ಮಾಡದಿರುವುದು ನಮ್ಮ ಕರ್ವವ್ಯ. ಆಧುನಿಕತೆಯ ನೆಪದಲ್ಲಿ ಮರಗಳನ್ನು ಕಡಿದು, ಅರಣ್ಯ ನಾಶವಾಗಿ ಆನೆ ಸೇರಿದಂತೆ ಇತರೆ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಹಿಂದೆ ಕಾಫಿ ತೋಟಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಹಣ್ಣು ಕೊಡುವ ಮರಗಳನ್ನು ಬೆಳೆಸುತ್ತಿದ್ದರು. ಈಗ ವ್ಯವಹಾರಿಕವಾಗಿ ಅನುಕೂಲವಾಗುವ ಮರಗಳನ್ನು ಬೆಳೆಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಪ್ರತಿ ವ್ಯಕ್ತಿಯು ಹುಟ್ಟಿನಿಂದ, ಸಾಯುವವರೆಗೂ ಮಾನವ ಹಕ್ಕುಗಳನ್ನು ಹೊಂದಿರುತ್ತಾನೆ. ಇವುಗಳನ್ನು ಸರಿಯಾಗಿ ಅರಿತುಕೊಳ್ಳಲು ಶಕ್ತಿಶಾಲಿ ಆಯುಧವಾದ ಶಿಕ್ಷಣ ಅತ್ಯವಶ್ಯಕವಾಗಿದೆ. ಅಲ್ಲದೆ ಸ್ಥಳೀಯರಿಗೆ ಪೋತ್ಸಾಹಿಸುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಪಟ್ಟಣದಲ್ಲಿರುವ ಕೋಳಿ ಅಂಗಡಿಗಳನ್ನು ಶ್ರೀಘ್ರದಲ್ಲಿ ತೆರವು ಮಾಡಿ, ವ್ಯಾಪಾರಕ್ಕೆ ಒಂದೆ ಕಡೆ ಅನುವೂ ಮಾಡಿ ಕೊಡಲಾಗುವುದು ಎಂದರು.

ಮಾನವ ಹಕ್ಕುಗಳ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ಮನೀಶ್ ಸೂರ್ಯ ಮಾತನಾಡಿ, ಎಲ್ಲ ತಾಲೂಕು ಸಮಿತಿಯಿಂದ ಕಾನೂನು ಅರಿವು ಮೂಡಿಸುವುದಕ್ಕಾಗಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಸೂಚಿಸಿದ್ದೇನೆ. ನಮ್ಮ ಸಮಿತಿಯಿಂದ ಸಾರ್ವಜನಿಕರ ಹಿತ ಕಾಪಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪತ್ರಕರ್ತರ ಸಂಘದ ಅಧ್ಯಕ್ಷೆ.ಭಾರತೀಗೌಡ, ಮಾನವ ಹಕ್ಕುಗಳ ಹೋರಾಟಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಜಿ.ನಿಂಗರಾಜ್, ತಾಲೂಕು ಅಧ್ಯಕ್ಷ ಅರುಣ್‌ಕುಮಾರ್, ಉಪಾಧ್ಯಕ್ಷ ರತ್ನಾಕರ್. ಗೌರವಾಧ್ಯಕ್ಷ ಖಾಸೀಂ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ನಗರಾಧ್ಯಕ್ಷ ಹರೀಶ್, ನೀಲಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net