ಪಠ್ಯದ ಜತೆ ಪಠ್ಯೇತರವೂ ಮುಖ್ಯ

5 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ಜೀವದಲ್ಲಿ ಸಾಧನೆ ಮಾಡಬೇಕು ಎಂದು ಗಾಯಕಿ ಅನುರಾಧಾ ಭಟ್ ಹೇಳಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ವತಿಯಿಂದ ಸೃಜನಾ ರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ಥವಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಕನಸು ಇಟ್ಟುಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಸಾಧನೆ ಮಾಡಲು ಇಂದು ಹಲವು ವೇದಿಕೆಗಳಿವೆ. ವಿದ್ಯಾರ್ಥಿಗಳು ವಿಭಿನ್ನ ಅಭಿರುಚಿ ಇಟ್ಟುಕೊಂಡು ಗುರಿ ತಲುಪಲು ಪ್ರಯತ್ನಿಸಬೇಕು. ನಿಮಗೆ ಇರುವ ಸೌಲಭ್ಯ ಬಳಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದ ಅವರು, ನಿರಂತರ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ ಎಂದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಕರ್ನಾಟಕ ಕಾಲೇಜು ರಾಜ್ಯ, ದೇಶಕ್ಕೆ ಅನೇಕ ಪ್ರತಿಭೆಗಳನ್ನು ನೀಡಿದೆ. ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ಉತ್ತಮ ಮೌಲ್ಯ ಅಳವಡಿಸಿಕೊಂಡು ದೇಶದ ಸಂಸ್ಕೃತಿ, ಪರಂಪರೆ ಬೆಳೆಸಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು ಸಾಧನೆ ಮೂಲಕ ಧಾರವಾಡ ನಗರಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ ಮಾತನಾಡಿ, ಪ್ರತಿ ವಿದ್ಯಾರ್ಥಿ ಪ್ರತಿಭೆ ಹೊಂದಿರುತ್ತಾನೆ. ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೌಶಲ ಮತ್ತು ನೈಪುಣ್ಯತೆ ಮುಖ್ಯ ಎಂದರು.
ಸಾರ್ಥವಾಹ ಸಾಂಸ್ಕೃತಿಕ ಉತ್ಸವದ ಪದವಿ ವಿಭಾಗದಲ್ಲಿ ಜೆಎಸ್‌ಎಸ್ ಬನಶಂಕರಿ ಕಾಲೇಜು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದರೆ, ಕರ್ನಾಟಕ ಕಲಾ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಪಿಯುಸಿ ವಿಭಾಗದಲ್ಲಿ ಧಾರವಾಡದ ಜವಾಹರ ನವೋದಯ ವಿದ್ಯಾಲಯ ಚಾಂಪಿಯನ್‌ಶಿಪ್ ಪಡೆದರೆ, ಕರ್ನಾಟಕ ಕಲಾ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಹು-ಧಾ ಅವಳಿನಗರದ 35 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೆಸಿಡಿ ಕಲಾ ಕಾಲೇಜಿನ ಪ್ರಭಾರ ಪ್ರಾಚಾರ್ಯೆ ಡಾ. ಮಂಜುಳಾ ಚಲುವಾದಿ ಸ್ವಾಗತಿಸಿದರು. ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ. ಜಗದೀಶ. ಕೆ ಉತ್ಸವದ ವರದಿ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net