ಶೀಲ ಶಂಕಿಸಿ ಪತ್ನಿ ಕೊಂದು ಪತಿ ಆತ್ಮಹತ್ಯೆ

Murder
Published on

ಆಲಮೇಲ: ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ ಪತ್ನಿಯನ್ನು ಮಂಗಳವಾರ ರಾತ್ರಿ ಹತ್ಯೆ ಮಾಡಿರುವ ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಮೀಪದ ನಾಗರಳ್ಳಿ ಗ್ರಾಮದವರಾದ ಮೃತ ಹಣಮಂತ ವಗ್ಗಪ್ಪ ಪೂಜಾರಿ(30) ಹಾಗೂ ಆತನ ಪತ್ನಿ ಯಲ್ಲವ್ವ ಹಣಮಂತ ಪೂಜಾರಿ(25)ಮೃತಪಟ್ಟವರು.
ಕೂಲಿ ಕೆಲಸಕ್ಕಾಗಿ ಒಂದು ತಿಂಗಳ ಹಿಂದೆ ಆಲಮೇಲ ಪಟ್ಟಣಕ್ಕೆ ಆಗಮಿಸಿ ಕಡಣಿ ರಸ್ತೆಗೆ ಹೊಂದಿಕೊಂಡಿದ್ದ ಮಹಿಬೂಬ್ ನಗರ ಬಡಾವಣೆಯಲ್ಲಿ ನೆಲೆಸಿದ್ದರು.
ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಮಂಗಳವಾರ ರಾತ್ರಿಯೂ ಅನೈತಿಕ ಸಂಬಂಧ ಕುರಿತು ದಂಪತಿ ನಡುವೆ ಆರಂಭಗೊಂಡ ಜಗಳ ತಾರಕಕ್ಕೇರಿ ಇಬ್ಬರ ಸಾವಿನಲ್ಲಿ ಅಂತ್ಯ ಕಂಡಿದೆ.

ಮಾರಕಾಸದಿಂದ ಪತ್ನಿಯನ್ನು ಹತ್ಯೆ ಮಾಡಿದ ಪತಿ ಬಳಿಕ ಅದೇ ಸ್ಥಳದಲ್ಲಿ ನೇಣಿಗೆ ಶರಣಾಗಿದ್ದಾನೆ. ಬುಧವಾರ ನಸುಕಿನಲ್ಲಿ ದಂಪತಿಯ 3 ವರ್ಷದ ಮಗು ಹೆತ್ತವರ ದುರಂತ ಕಂಡು ಕಿರುಚಾಟ ಆರಂಭಿಸಿದೆ. ಮಗುವಿನ ಆಕ್ರಂದನ ಕೇಳಿದ ಅಕ್ಕಪಕ್ಕದ ಮನೆಯವರು ಮನೆ ಬಾಗಿಲು ಮುರಿದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಎಂ.ಬಿ. ಸಂಕದ, ಸಿಂದಗಿ ಸಿಪಿಐ ಸತೀಶಕುಮಾರ ಕಾಂಬಳೆ, ಪಿಎಸ್‌ಐ ನಿಂಗಪ್ಪ ಪೂಜಾರಿ ಭೇಟಿ ನೀಡಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net