ಆಲಮಟ್ಟಿ ಡ್ಯಾಂ 524 ಮೀ.ಗೆ ಎತ್ತರಿಸಲೇಬೇಕು

INDI-26-2
ಇಂಡಿ ಪಟ್ಟಣದ ಆಡಳಿತ ಸೌಧ ಸಬಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಕಂದಾಯ ಉಪವಿಭಾಗಾಧಕಾರಿ ಅನುರಾಧಾ ವಸ್ತ್ರದ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಇಒ ನಂದೀಪ ರಾಠೋಡ, ಡಿ.ಎಸ್.ಪಿ ಜಗದೀಶ ಎಚ್. ಇತರರಿದ್ದರು.
Published on

ಇಂಡಿ: ಆಲಮಟ್ಟಿ ಜಲಾಶಯವನ್ನು ಮಹಾರಾಷ್ಟ್ರದವರು 524 ಮೀಗೆ ಎತ್ತರಿಸಲು ಕ್ಯಾತೆ ತೆಗೆಯುತ್ತಿದ್ದು, ಡಾಂ ಎತ್ತರಿಸಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಆಡಳಿತ ಸೌಧ ಸಭಾಭವನದಲ್ಲಿ ಸೋಮವಾರ ನಡೆದ 2025-26ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಿಜಯಪುರದಲ್ಲಿ ರಾಜ್ಯಮಟ್ಟದ ಸಭೆ ನಡೆಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯಲಾಗುವುದು ಎಂದರು.

ಟಾಯಿಮ್ ಬಾಂಡ್ ಮೂಲಕ ಹಣ ಸಂಗ್ರಹಿಸಿ ಇಲ್ಲವೆ ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು. ಬಚಾವತ್ ಐ ತೀರ್ಪಿನ ಪ್ರಕಾರ ಆಣೆಕಟ್ಟಿನ ಎತ್ತರ 524ಮೀ ಮಾಡಬೇಕು. 734 ಟಿಎಂಸಿ ನೀರು ಬಳಸಿಕೊಳ್ಳಬೇಕಾಗಿದೆ. ಬ್ರಿಜೇಶ ಮಿಶ್ರಾ ತೀರ್ಪಿನ ನೀರಾವರಿ ಹಂಚಿಕೆಯ ಪ್ರಕಾರ ಬಿ. ಸ್ಕೀಮಿನ ಯೋಜನೆಗಳಿಗೆ ಕಾನೂನು ಬದ್ಧವಾಗಿ ನೀರು ಪಡೆಯಬೇಕಾದರೆ ಎತ್ತರ 524 ಮೀ. ಆಗಲೇಬೇಕೆಂದು ತಿಳಿಸಿದರು.

ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳವಾಡ ಏತ ನೀರಾವರಿ, ಇಂಡಿ ಬ್ರಾಂಚ್ ಕಾಲುವೆ ಮತ್ತು ರೇವಣಸಿದ್ಧೇಶ್ವರ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಆಲಮಟ್ಟಿ ಅಣೆಕಟ್ಟಿನ ಎತ್ತರ 524 ಮೀ. ಆಗಬೇಕು. ಆಲಮಟ್ಟಿ ಅಣೆಕಟ್ಟು ನೀರು ಸಂಗ್ರಹಕ್ಕೂ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಕ್ಕೂ ಸಂಬಂಧವೇ ಇಲ್ಲ ಎನ್ನುವುದಕ್ಕೆ ವೈಜ್ಞಾನಿಕ ವರದಿ ಸಲ್ಲಿಕೆಯಾಗಿದೆ ಎಂದರು.

ಆಲಮಟ್ಟಿ ಅಣೆಕಟ್ಟು 524ಕ್ಕೆ ಏರಿಸುವಂತೆ ಸಭೆಯಲ್ಲಿ ಠರಾವು ಪಾಸ್ ಮಾಡಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಲಿತಾಂಶ ಕಡಿಮೆ ಬಂದಿದ್ದು, ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸುವ ಕುರಿತು ಚರ್ಚಿಸಲಾಯಿತು. ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಬೀಜ ಮತ್ತು ಗೊಬ್ಬರ ರೈತರಿಗೆ ವಿತರಿಸುವ ಕುರಿತು ಚರ್ಚಿಸಲಾಯಿತು.

ಹೆಸ್ಕಾಂ ಎಇಇ ಎಸ್.ಆರ್. ಮೆಂಡೆದಾರ ಮಾತನಾಡಿ, ತಾಲೂಕಿನಲ್ಲಿ 15 ವಿದ್ಯುತ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಮತ್ತೆ ನಾಲ್ಕು ವಿದ್ಯುತ್ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಕಳುಹಿಸಿದ್ದು ಮಂಜೂರಾತಿ ದೊರೆತಿದೆ ಎಂದರು.

ಇಂಡಿಯಲ್ಲಿ ತಾಯಿ ಮಗು ಆಸ್ಪತ್ರೆ ಪ್ರಾರಂಭಿಸುವುದು ಮತ್ತು ಕುಡಿಯುವ ನೀರಿನ ಪ್ರದೇಶಗಳಿಗೆ ನೀರು ಪೂರೈಸುವ ಕುರಿತು ಚರ್ಚೆ ನಡೆಯಿತು. ಹಕ್ಕು ಪತ್ರ ವಿತರಣೆಯಲ್ಲಿ ಕರ್ನಾಟಕದಲ್ಲಿ ರಾಜ್ಯಕ್ಕೆ ಇಂಡಿ ತಾಲೂಕು ಎರಡನೇ ಸ್ಥಾನದಲ್ಲಿದೆ. ತಾಲೂಕಿನಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕ ಆರಂಭಕ್ಕೆ ಮತ್ತು ಅದಕ್ಕೆ ಬೇಕಾಗುವ ಹಣ ನೀಡುವುದಾಗಿ ಶಾಸಕರು ತಿಳಿಸಿದರು.

ಕೃಷಿ ಇಲಾಖೆಯ ಮಹಾದೇವಪ್ಪ ಏವೂರ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಹೆಸ್ಕಾಂನ ಎಸ್.ಎಸ್. ಬಿರಾದಾರ, ಸಂಜಯ ಕಡಗೇಕರ, ಚಂದ್ರಕಾಂತ ಪವಾರ ಮಾತನಾಡಿದರು.

ಕಂದಾಯ ಉಪವಿಭಾಗಾಧಕಾರಿ ಅನುರಾಧಾ ವಸ್ತ್ರದ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಇಒ ನಂದೀಪ ರಾಠೋಡ, ಡಿ.ಎಸ್.ಪಿ ಜಗದೀಶ ಎಚ್., ನಾಮ ನಿರ್ದೇಶಿತ ಸದಸ್ಯರಾದ ಬಿ.ಕೆ. ಪಾಟೀಲ ಗುರನಗೌಡ ಪಾಟೀಲ, ದೀಪಾಲಿ ಕುಲಕರ್ಣಿ, ಜೆ.ಎಂ. ಕರಜಗಿ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net