ಜಂಬೂಸವಾರಿ ಹೆಚ್ಚು ಜನ ವೀಕ್ಷಿಸಲು ಅವಕಾಶ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿಕೆ

h.c.mahadevappa-600x445
Published on

ಮೈಸೂರು: ದಸರಾ ಮಹೋತ್ಸವದಲ್ಲಿ ಹೆಚ್ಚು ಜನರು ವೀಕ್ಷಣೆ ಮಾಡುವ ಉದ್ದೇಶದಿಂದ ಈ ಬಾರಿ ಅರಮನೆ ಆವರಣದಲ್ಲಿ ಜಂಬೂಸವಾರಿ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಜಂಬೂಸವಾರಿ ಮಾರ್ಗ ಬದಲಾವಣೆ ಮಾಡುವುದರಿಂದ 10ರಿಂದ 15 ಸಾವಿರ ಆಸನಗಳನ್ನು ಹೆಚ್ಚು ಹಾಕಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚು ಜನರು ಜಂಬೂಸವಾರಿ ವೀಕ್ಷಿಸಲು ಅನುಕೂಲವಾಗುತ್ತದೆ ಎಂದು ಶನಿವಾರ ಮಾವುತರು, ಕಾವಾಡಿಗಳ ಉಪಾಹಾರ ಕೂಟದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವರ್ಷದಿಂದ ವರ್ಷಕ್ಕೆ ದಸರಾಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಟಿಕೆಟ್, ಪಾಸ್ ತೆಗೆದುಕೊಂಡವರು ಆಸನ ಸಿಗದೆ ಸಮಸ್ಯೆ ಎದುರಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅರಮನೆಯಲ್ಲಿ ಆಸನಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ. ದೇಶ, ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಆಸನಗಳ ಸಮಸ್ಯೆ ಆಗುತ್ತಿದೆ. ಅರಮನೆ ಆವರಣದಲ್ಲಿ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಮಾತ್ರ ಮಾರ್ಪಾಡು ಮಾಡಲು ನಿರ್ಧರಿಸಿದ್ದು ಸುಮಾರು 500 ಮೀಟರ್ ಹೆಚ್ಚಾಗಲಿದೆ ಎಂದು ಹೇಳಿದರು.
ದಸರಾ ಆಚರಣೆಗೆ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಸಲು ಜವಾಬ್ದಾರಿಯುತವಾಗಿ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಇಷ್ಟು ದೊಡ್ಡ ಹಬ್ಬ ಆಚರಣೆ ಮಾಡುವಾಗ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ. ಎಲ್ಲವನ್ನೂ ಸರಿದೂಗಿಸಿಕೊಂಡು ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತೇವೆ ಎಂದರು.
ಏರ್ ಶೋ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದು ಅನುಮತಿ ದೊರೆತರೆ ಏರ್ ಶೋ ಮಾಡುತ್ತೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ:
ಧನಂಜಯ ಹಾಗೂ ಕಂಜನ್ ಆನೆಗಳು ಕಾದಾಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆಹಾರ ತಿನ್ನುವ ವೇಳೆ ಆನೆಗಳ ನಡುವೆ ಗಲಾಟೆಯಾಗಿ ಧನಂಜಯ, ಕಂಜನ್ ಆನೆಯನ್ನು ರಸ್ತೆಗೆ ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ. ಮಾವುತ ಆನೆಯನ್ನು ನಿಯಂತ್ರಿಸಿದ್ದಾನೆ. ಘಟನೆ ಸಂಬಂಧ ಮಾಹಿತಿ ಪಡೆದಿದ್ದು, ಆಂತಕಪಡುವ ಅಗತ್ಯ ಇಲ್ಲ. ಪ್ರಾಣಿಗಳು ಯಾವಾಗ ಹೇಗೆ ವರ್ತಿಸುತ್ತವೆ ಎಂದು ಗೊತ್ತಾಗುವುದಿಲ್ಲ. ಹೀಗಾಗಿ ಕಣ್ಣಲ್ಲಿ ಕಣ್ಣಿಟ್ಟು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ತಿಳಿಸಿದ್ದೇನೆ ಎಂದರು.
ಕರ್ನಾಟಕ ಅಭಿವೃದ್ಧಿಗೆ ಹೆಸರಾದ ರಾಜ್ಯ. ಆದರೆ, ಇತ್ತೀಚೆಗೆ ರಾಜಕಾರಣಿಗಳ ವೈಯಕ್ತಿಕ ತೇಜೋವಧೆ ನಡೆಯುತ್ತಿದೆ. ಯಾರಾದರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು. ವೈಯಕ್ತಿಕ ತೇಜೋವಧೆ ಮಾಡಬಾರದು. ಇದರಿಂದ ರಾಜ್ಯದ ಮಾನ ಹರಾಜಾಗಲಿದ್ದು, ರಾಜ್ಯದ ರಾಜಕಾರಣಿಗಳು ಭೂಗಳ್ಳರು ಎಂಬ ಕೆಟ್ಟ ಸಂದೇಶ ರವಾನೆಯಾಗಲಿದೆ. ಇದು ಸರಿಯಲ್ಲ ಎಂದು ಬೇಸರ ವ್ಯಕ್ಯಪಡಿಸಿದರು.
ಸಿದ್ದರಾಮಯ್ಯಗೆ ಕಳಂಕ ತರುವ ಯತ್ನ ಸರಿಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕ ಹೊಂದಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಆದರೂ ಅವರ ವಿರುದ್ಧ ಆಧಾರರಹಿತ ಆರೋಪ ಮಾಡಲಾಗುತ್ತಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣಿಗಳೇ ಕಡಿಮೆ. ಈ ರೀತಿ ಸುಳ್ಳು ಆರೋಪ ಮಾಡಿ, ಸಿದ್ದರಾಮಯ್ಯ ಅವರಂಥ ಪ್ರಾಮಾಣಿಕ ರಾಜಕಾರಣಿಗೆ ಕಳಂಕ ತರಲು ಯತ್ನಿಸುವುದು ಸರಿಯಲ್ಲ ಎಂದು ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net