

ಬಾಗಲಕೋಟೆ: ಅನುಮತಿ ಪಡೆದ ನವನಗರದ ಸೆಕ್ಟರ್‌ನಲ್ಲಿ ಮಾತ್ರ ಮುಸ್ಲಿಂ ತಬ್ಲಿಗಿ ಇಜ್ತೇಮಾಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಎಂದು ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಜಾಗರಣ ವೇದಿಕೆ ಕಾರ್ಯಕರ್ತರು, ನವನಗರದ ಸೆಕ್ಟರ್ ಸಂಖ್ಯೆ 112ರಲ್ಲಿ ಮುಸ್ಲಿಮರು ತಬ್ಲಿಗಿ ಇಜ್ತೇಮಾ ಮಾಡುವ ಉದ್ದೇಶದಿಂದ ಅನುಮತಿ ಪಡೆದಿದ್ದಾರೆ. ಆದರೆ, ಅದರ ಜತೆಗೆ ಅನುಮತಿ ಪಡೆಯದ 110 ಹಾಗೂ 111 ಸೆಕ್ಟರ್‌ನಲ್ಲೂ ಕಾರ್ಯಕ್ರಮದ ಸಿದ್ಧತೆ ನಡೆಸಿದ್ದಾರೆ. ಅನುಮತಿ ಪಡೆದಿರುವ ಜಾಗದಲ್ಲಿ ಮಾತ್ರ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಬಿಟಿಡಿಎ ಅಧಿಕಾರಿಗಳು ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ಸತಾಯಿಸುತ್ತಾರೆ. ಆದರೆ, ಮುಸ್ಲಿಂ ಸಮುದಾಯದ ಬಡೇ ಇಜ್ತೇಮಾ ಕಾರ್ಯಕ್ರಮಕ್ಕೆ ಸರ್ಕಾರಿ ಜಮೀನು ನೀಡುವ ಜತೆಗೆ ವಾರಗಟ್ಟಲೆ ಅದನ್ನು ಸರ್ಕಾರದ ಹಣದಿಂದಲೇ ಸ್ವಚ್ಛಗೊಳಿಸಿದ್ದಾರೆ. ಬಿಟಿಡಿಎ ಅಧಿಕಾರಿಗಳು ಮುಸ್ಲಿಮರಿಗೆ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಹಿಂದುಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ಜಾಗರಣಾ ವೇದಿಕೆ ಮುಖಂಡ ಪ್ರಶಾಂತ ಪವಾರ ಮಾತನಾಡಿ, ತಬ್ಲಿಗಿ ಇಜ್ತೇಮಾಗೆ ಸರ್ಕಾರಿ ಜಾಗ ನೀಡಬೇಡಿ ಎಂದು ಆಗ್ರಹಿಸಿ ಅನೇಕ ದಿನಗಳಿಂದ ಹಲವಾರು ಅಧಿಕಾರಿಗಳಿಗೆ ಮನವಿ ನೀಡಿದರೂ ಅಧಿಕಾರಿಗಳಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಲಕ್ಷಾಂತರ ಮುಸ್ಲಿಮರು ಸೇರುವ ಇಂತಹ ಕಾರ್ಯಕ್ರಮಗಳಲ್ಲಿ ಯಾವ ರಾಜ್ಯ ಹಾಗೂ ದೇಶಗಳಿಂದ ಮುಲ್ಲಾ, ಮೌಲ್ವಿಗಳು ಬರುತ್ತಾರೆ ಎಂದು ಪೊಲೀಸರಿಗೆ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದರು.
ಹಿಂದು ಜಾಗರಣ ವೇದಿಕೆ ಯುವ ವಾಹಿನಿ ಪ್ರಮುಖ ಕುಮಾರಸ್ವಾಮಿ ಹಿರೇಮಠ, ಮುಖಂಡರಾದ ಅಶೋಕ ಲಿಂಬಾವಳಿ, ಬಸವರಾಜ ಯಂಕಂಚಿ, ವೀರಣ್ಣ ಶಿರಗಣ್ಣವರ, ಕಿರಣ ಪವಾಡಶೆಟ್ಟರ, ವಿಕ್ರಂ ದೇಶಪಾಂಡೆ, ಈರಣ್ಣ ಲಾಯದಗುಂದಿ, ಮನೋಜ ಕರೋಡಿವಾಲ, ಶ್ರೀನಾಥ ಸಜ್ಜನ, ಸದಾನಂದ ನಾರಾ, ಶಶಿಕಲಾ ಸುರೇಶ ಮಜ್ಜಗಿ, ವೀರಣ್ಣ ಹಳೇಗೌಡರ ಇತರರಿದ್ದರು.
ಅನುಮತಿ ಪಡೆದ ಸೆಕ್ಟರ್ ಸೇರಿ ಪಕ್ಕದ ಎರಡು ಸೆಕ್ಟರ್‌ನ್ನು ಕಾರ್ಯಕ್ರಮಕ್ಕಾಗಿ ಸ್ವಚ್ಛಗೊಳಿಸಿ, ಅಲ್ಲಿ ಪೆಂಡಾಲ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಇದರ ಬಗ್ಗೆ ಪರಿಶೀಲಿಸೋಣ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. ಇದಕ್ಕೆ ಸಮಾಧಾನಗೊಳ್ಳದ ಮುಖಂಡರು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ತಿಳಿಸುವವರೆಗೆ ಜಾಗ ಬಿಟ್ಟು ಕದಲಲ್ಲ ಎಂದು ಹಠ ಹಿಡಿದರು. ನಂತರ ಸಭೆ ನಡೆಸಿ ಪ್ರತಿಭಟನಾಕಾರರ ಬಳಿಗೆ ಬಂದ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್, ಅನುಮತಿ ಪಡೆದ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುವುದು. ಉಳಿದವುಗಳನ್ನು ತೆರವುಗೊಳಿಸಲಾಗುವುದು ಎಂದರು.