

ಹುಬ್ಬಳ್ಳಿ : ಗಣೇಶೋತ್ಸವ ಅಂಗವಾಗಿ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಬಳಸುವ ಡಿ.ಜೆ. ಮ್ಯೂಸಿಕ್ ಸೌಂಡ್ಗೆ ಬೆಳಗಿನ ಜಾವ 4 ಗಂಟೆಯವರೆಗೆ ಅನುಮತಿ ನೀಡಬೇಕು ಎಂದು ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಶಿವಾನಂದ ಮುತ್ತಣ್ಣವರ ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಮಧ್ಯರಾತ್ರಿ 12 ಗಂಟೆಯವರೆಗೂ ಡಿಜೆ ಮತ್ತಿತರ ಮ್ಯೂಸಿಕ್ ಸಿಸ್ಟಂಗಳ ಬಳಕೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಹಿಂದುಗಳ ದೊಡ್ಡ ಹಬ್ಬ ಗಣೇಶೋತ್ಸವಕ್ಕೆ ಅವಕಾಶ ನೀಡದಿರುವುದು ಸರಿಯಲ್ಲ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ಕುರಿತು ರ್ಚಚಿಸಲು ಧಾರವಾಡದ ತಮ್ಮ ಕಚೇರಿಯಲ್ಲಿ ಸೆ. 3 ಅಥವಾ 4 ರಂದು ಪೊಲೀಸ್ ಆಯುಕ್ತರು, ಗಜಾನನ ಉತ್ಸವ ಸಮಿತಿಯ ಪ್ರಮುಖರ ಸಭೆ ಕರೆದು, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗಣೇಶ ವಿಸರ್ಜನೆ ಮೆರವಣಿಗೆಗೆ ಮಾರನೇ ದಿನದ ಬೆಳಗಿನ ಜಾವ 4 ಗಂಟೆಯವರೆಗೆ ಅನುಮತಿ ನೀಡುವಂತೆ ತಾವು ಸಹ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳೊಂದಿಗೆ ಸೇರಿ ಸೆ. 3ರಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಡಿಜೆ ಬಳಕೆಗೆ ಅವಕಾಶ ನೀಡದೇ ಇದ್ದರೆ ಮುಂದಿನ ಹೋರಾಟದ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಎಸ್.ಬಿ. ಅರ್ಕಸಾಲಿ, ಪಾಂಡು ಬೆಲಾನ, ಪಾಂಡು ಭಜಂತ್ರಿ, ಅಜಯ್ ಸುದ್ದಿಗೋಷ್ಠಿಯಲ್ಲಿ ಇದ್ದರು.