ದಲಿತರಿಗೂ ಉಳುಮೆಗೆ ಅವಕಾಶ ನೀಡಿ

5KDR2
ಯಳಗೊಂಡನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಉಳುಮೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್(ಪಾಂಡುರಂಗಬಣ) ಸಂಘಟನೆೆಯಿಂದ ಪ್ರತಿಭಟನೆ ನಡೆಸಲಾಯಿತು. ಕೃಷ್ಣಪ್ಪ, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಸುರೇಶ್, ಸಚಿನ್ ಮತ್ತಿತರಿದ್ದರು.
Published on

ಕಡೂರು: ತಾಲೂಕಿನ ಯಳಗೊಂಡನಹಳ್ಳಿ ಗ್ರಾಮದಲ್ಲಿರುವ ಸರ್ವೇ ನಂ 32, 39 ಮತ್ತು 33 ರಲ್ಲಿರುವ ಸರ್ಕಾರಿ ಜಾಗ ಸುಮಾರು 130 ಎಕರೆ ವಿಸ್ತೀರ್ಣವಿದ್ದು, ಇದರಲ್ಲಿ ಸುಮಾರು 80 ಎಕರೆ ಜಮೀನನ್ನು ಮೇಲ್ವರ್ಗದವರೇ ಉಳುಮೆ ಮಾಡಿದ್ದಾರೆ. ಇಲ್ಲಿ ದಲಿತರಿಗೂ ಅವಕಾಶ ಕೊಡಬೇಕು ಎಂದು ಡಿಎಸ್‌ಎಸ್ (ಪಾಂಡುರಂಗ ಬಣ) ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ ಒತ್ತಾಯಿಸಿದರು.
ಬಡ ಕೂಲಿ ಕಾರ್ಮಿಕರಾದ ದಲಿತ ಕುಟುಂಬಗಳು ಸಂಸಾರ ನಿರ್ವಹಣೆಗೆ ಕಷ್ಟಪಡುತ್ತಿವೆ. ಇಂತಹ ಕುಟುಂಬಗಳಿಗೆ ಕನಿಷ್ಟ 1 ಎಕರೆ ಜಮೀನನ್ನು ನೀಡಿದರೆ ಜೀವನ ನಡೆಸಲು ಅನುಕೂಲವಾಗುತ್ತದೆ. ಉಳ್ಳವರೇ ಹೀಗೆ ಸರ್ಕಾರದ ಜಾಗಗಳನ್ನು ಅತಿಕ್ರಮಿಸಿ ದಲಿತರಿಗೆ ಏನೂ ಇಲ್ಲದಂತಾಗಿದೆ. ಈ ಕೂಡಲೇ ಇಲ್ಲಿ ಉಳುಮೆ ಮಾಡಿರುವುದನ್ನು ತೆರವುಗೊಳಿಸಿ ದಲಿತ ಕುಟುಂಬಗಳಿಗೆ ನೀಡಿ ಅವರ ಜೀವನಕ್ಕೆ ಆಸರೆಯಾಗಬೇಕು. ಈ ಬಗ್ಗೆ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ಸ್ಥಳಕ್ಕೆ ಡಿವೈಎಸ್ಪಿ ಹಾಲಮೂರ್ತಿರಾವ್ ಕಡೂರು ಪಿಎಸೈ ಪವನ್‌ಕುಮಾರ್ ಭೇಟಿ ನೀಡಿದ್ದರು. ಮಲ್ಲಿದೇವಿಹಳ್ಳಿ ಶ್ರೀ ನಿವಾಸ್, ಅಂಬೇಡ್ಕರ್ ನಗರದ ಮಂಜಮ್ಮ, ಶಾರದಮ್ಮ, ನಾಗಮ್ಮ, ಮಮತಾ, ಡಿಎಸ್‌ಎಸ್ ಸಂಚಾಲಕ ಸಚಿನ್, ಮುಖಂಡರಾದ ಸುರೇಶ್, ರುದ್ರಪ್ಪ, ದೇವರಾಜು, ಗಣೇಶ್, ಕರಿಯಪ್ಪ, ರಂಗನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net