ಅರ್ಹರಿಗಷ್ಟೆ ನಿವೇಶನ ಹಂಚಿಕೆ

BYD MLA SHIVANNANAVAR
Published on

ಬ್ಯಾಡಗಿ: ಈ ಹಿಂದೆ 2017ರಲ್ಲಿ ಆಯ್ಕೆಗೊಂಡ ಫಲಾನುಭವಿಗಳ ಪಟ್ಟಿಯಲ್ಲಿರುವ ಕುಟುಂಬಗಳ ಹೆಸರುಗಳನ್ನು ಮರು ಪರಿಶೀಲಿಸಿ, ಅರ್ಹರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುರಸಭೆ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

2017ರಲ್ಲಿ ಪುರಸಭೆಯಿಂದ 10 ಎಕರೆ ಜಮೀನು ಖರೀದಿಸಿ 814 ಫಲಾನುಭವಿಗಳ ಪಟ್ಟಿ ತಯಾರಿಸಿ ಆಯ್ಕೆ ಮಾಡಲಾಗಿತ್ತು. ಬಳಿಕ ಹಿಂದಿನ ಶಾಸಕರು ಹಕ್ಕುಪತ್ರ ನೀಡಲು ಪ್ರಯತ್ನ ನಡೆಸಿದರು. ಈಗ ಆಶ್ರಯ ಸಮಿತಿ ರಚನೆಯಾಗಿದ್ದು, 3 ಸಭೆಗಳು ನನ್ನ ನೇತೃತ್ವದಲ್ಲಿ ನಡೆದಿವೆ. ಹಿಂದಿನ 814 ಜನರ ಆಯ್ಕೆ ಪಟ್ಟಿಯಲ್ಲಿ ಕೆಲವರಿಗೆ ಬೇರೆ ಬೇರೆ ಯೋಜನೆಯಡಿ ಮನೆ ಮಂಜೂರಾಗಿವೆ. ಕೆಲವರು ಸ್ವಂತ ಮನೆ ಕೂಡ ನಿರ್ವಿುಸಿಕೊಂಡಿದ್ದಾರೆ. ಕೊಳಚೆ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೆಲವರಿಗೆ ಹಕ್ಕುಪತ್ರ ವಿತರಣೆಯಾಗಿವೆ. ಇವರನ್ನು ಹೊರತುಪಡಿಸಿ ಇನ್ನುಳಿದ ಅರ್ಹ ಕುಟುಂಬಗಳಿಗೆ ಆದ್ಯತೆ ಮೇರೆಗೆ ಹಕ್ಕುಪತ್ರ ನೀಡಲಾಗುವುದು. ಈ ಹಿಂದೆ 30 ಸಾವಿರ ರೂ.ಗಳನ್ನು ಭರಿಸಿದ ಫಲಾನುಭವಿಗಳ ಪೈಕಿ ಕೆಲವರು ಅನರ್ಹರಿದ್ದಾರೆ. ದಾಖಲೆಗಳ ಪರಿಶೀಲನೆ ನಡೆದಿದ್ದು, ನೈಜ ಫಲಾನುಭವಿಗಳಿಗೆ ಅನ್ಯಾಯ ಮಾಡುವುದಿಲ್ಲ ಎಂದರು.

ಹೊಸ ಹೆಸರು ಸೇರ್ಪಡೆ:

ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಹೆಸರುಗಳನ್ನು ಮರುಪರಿಶೀಲಿಸಿ ಫಲಾನುಭವಿ ಆಯ್ಕೆ ಮಾಡುವಾಗ ಹೊಸದಾಗಿ ಕೆಲವರ ಹೆಸರು ಸೇರ್ಪಡೆಗೊಂಡಿವೆ. ಆಯಾ ವಾರ್ಡ್ ಸದಸ್ಯರಿಗೂ ಮಾಹಿತಿ ನೀಡಿಲ್ಲ, ಸದಸ್ಯರ ಗಮನಕ್ಕೂ ತಂದಿಲ್ಲ. ಈಗ 30 ಸಾವಿರ ರೂ. ತುಂಬಿದ ಕಾರಣಕ್ಕೆ ಎಲ್ಲರನ್ನೂ ಅರ್ಹರೆನ್ನಲು ಸಾಧ್ಯವಿಲ್ಲ. ಬಹುತೇಕರು ಅನರ್ಹರಿರುವುದು ತಿಳಿದುಬಂದಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕಿದೆ ಎಂದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಶೆಟ್ಟರ, ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಶಂಕರ ಕುಸಗೂರು, ವಿನಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net