ಅರಣ್ಯ ಭೂಮಿ ನೀಡುವುದು ಸಂವಿಧಾನಬದ್ಧ ಹಕ್ಕು, ಹೋರಾಟಗಾರರ ವೇದಿಕೆಯ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿಕೆ

20ANKOLA1- Ravindra Naik
Published on

ಅಂಕೋಲಾ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ನೀಡುವುದು ಭಿಕ್ಷೆ ಅಥವಾ ಧಾನವಲ್ಲ, ಸಂವಿಧಾನ ಬದ್ಧ ಹಕ್ಕು, ಇಚ್ಚಾಶಕ್ತಿ ಕೊರತೆಯಿಂದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಶಿರಸಿ ಹೇಳಿದ್ದಾರೆ.
ಇಲ್ಲಿನ ಜೈಹಿಂದ್ ಹೈಸ್ಕೂಲ್​ನ ರಂಗಮಂದಿರದಲ್ಲಿ ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ನಿರಂತರ 33 ವರ್ಷ ಹೋರಾಟ ಸಂಘಟನೆ ಮೂಲಕ ಅರಣ್ಯ ಭೂಮಿ ಹಕ್ಕಿಗಾಗಿ ಜನಾಂದೋಲನ ಜರುಗಿದರೂ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ದೊರಕದಂತಾಗಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಬೇಕು ಮತ್ತು ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ನ. 7ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಜಿಲ್ಲಾ ಪ್ರಧಾನ ಸಂಚಾಲಕ ಜಿ.ಎಂ. ಶೆಟ್ಟಿ ಮಾತನಾಡಿ, ಅರಣ್ಯ ಭೂಮಿ ಹಕ್ಕು ಅರಣ್ಯವಾಸಿಗಳಿಗೆ ಒದಗಿಸದಿದ್ದಲ್ಲಿ ಜಿಲ್ಲೆಯು ನಿರಾಶ್ರಿತರ ಜಿಲ್ಲೆಯಾಗುತ್ತದೆ. ಕರಾವಳಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮತ್ತು ಅವೈವಿಜ್ಞಾನಿಕ ಕರಡು ಕಸ್ತೂರಿ ರಂಗನ್ ವರದಿ ತಿರಸ್ಕರಿಸುವುದು ಅನಿವಾರ್ಯ ಎಂದರು.
ಸಾಮಾಜಿಕ ಚಿಂತಕ ಆರ್.ವಿ. ನಾಯಕ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕಾನೂನು ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ವಿಫಲವಾಗದಂತೆ ಲಕ್ಷ ವಹಿಸಬೇಕು ಎಂದರು. ಜಿಲ್ಲಾ ಸಂಚಾಲಕ ರಾಜೇಶ ಎಂ.ನಾಯ್ಕ, ಹಿರಿಯ ವಕೀಲ ಉಮೇಶ ನಾಯ್ಕ, ಪಾಂಡುರಂಗ ಗೌಡ, ತಾಲೂಕು ಅಧ್ಯಕ್ಷ ರಮಾನಂದ ನಾಯಕ. ಉದಯ ವಿ. ನಾಯಕ ಮಾತನಾಡಿದರು.
ಡೋಂಗ್ರಿ ಗ್ರಾಪಂ ಸದಸ್ಯೆ ರೇಣುಕಾ ಸಿದ್ದಿ, ಹೊನ್ನೆಬೈಲ್ ಗ್ರಾಪಂ ಅಧ್ಯಕ್ಷ ವೆಂಕಟರಮಣ ನಾಯ್ಕ, ಪ್ರಮುಖರಾದ ರಾಮಚಂದ್ರ ತಾಂಡೇಲ್, ಸಂದೇಶ ನಾಯ್ಕ ಸೇರಿ ಹಲವರು ಉಪಸ್ಥಿತರಿದ್ದರು. ಅಚವೆ ಗ್ರಾಪಂ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ತಾಲೂಕು ಸಂಚಾಲಕ ಅರವಿಂದ ಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net