

ಗುಂಡ್ಲುಪೇಟೆ: ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದ್ದು ನಬಾರ್ಡ್‌ನಿಂದ ಪಟ್ಟಣದ ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ರೈತರು ಹಾಗೂ ವ್ಯಾಪಾರಿಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ತಮಗೆ ರೈತರ ಸಮಸ್ಯೆಗಳ ಬಗ್ಗೆ ಅರಿವಿದ್ದು, ಹೆಚ್ಚಿನ ಬೆಲೆ ದೊರಕುವ ಬೆಳೆಗಳನ್ನೇ ರೈತರು ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುತ್ತಿದೆ. ಬೆಳೆಗಳಿಗೆ ಬೆಲೆ ಕುಸಿತವಾದ ಸಂದರ್ಭದಲ್ಲಿ ಬೆಂಬಲ ಬೆಲೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ರೈತರು ಮತ್ತು ವ್ಯಾಪಾರಿಗಳ ನಡುವೆ ಉಂಟಾಗುವ ಭಿನ್ನಾಭಿಪ್ರಾಯ ನಿವಾರಣೆಗೆ ಪ್ರತಿ ತಿಂಗಳೂ ಸಭೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಮಾರುಕಟ್ಟೆಯಲ್ಲಿ ರಸ್ತೆ, ಚರಂಡಿ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ತರಕಾರಿ ತರುವ ರೈತರು ಮಾರುಕಟ್ಟೆ ಶುಚಿತ್ವಕ್ಕೆ ಸಹಕಾರ ನೀಡಬೇಕು. ರೈತರ ವಿಶ್ರಾಂತಿ ಕೊಠಡಿ ಸೇರಿದಂತೆ ಎಲ್ಲ ಬೇಡಿಕೆಗಳನ್ನೂ ಹಂತಹಂತವಾಗಿ ಪೂರೈಸಲಾಗುವುದು ಎಂದು ತಿಳಿಸಿದರು. ಎಪಿಎಂಸಿ ಅಧ್ಯಕ್ಷ ಬಸವರಾಜಪ್ಪ, ನಿರ್ದೇಶಕರಾದ ಪಿ.ಮಹದೇವಪ್ಪ, ಮಾಡ್ರಹಳ್ಳಿ ಮಹದೇವಪ್ಪ, ಆರ್.ಎಸ್.ನಾಗರಾಜು, ವಿರೂಪಾಕ್ಷಪ್ಪ, ಶಿವಮಾದಪ್ಪ, ವೆಂಕಟನಾಯ್ಕ, ಎಚ್.ಬಿ.ನಾಗರಾಜು, ಕಾರ್ಯದರ್ಶಿ ಶ್ರೀಧರ್ ಇದ್ದರು.
ಕಮಿಷನ್ ಜತೆಗೆ ವಿಳಂಬ ಪಾವತಿ : ತಮ್ಮ ಉತ್ಪನ್ನಗಳನ್ನು ಖರೀದಿಸುವ ವ್ಯಾಪಾರಿಗಳು ಶೇ.7 ಕಮೀಷನ್ ಕಡಿತಮಾಡಿಕೊಳ್ಳುವ ಜತೆಗೆ ವಿಳಂಬವಾಗಿ ಹಣ ಪಾವತಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗುತ್ತಿಲ್ಲ. ಆಯಾ ದಿನ ಮಾಡಿದ ಖರೀದಿಗಳಿಗೆ ಅದೇ ದಿನ ರೈತರಿಗೆ ಹಣಪಾವತಿಸುವಂತೆ ಕ್ರಮಕೈಗೊಳ್ಳಬೇಕು. ರೈತರಿಗೆ ವಿಶ್ರಾಂತಿ ಗೃಹದ ಅಗತ್ಯವಿದ್ದರೂ ನಿರ್ಮಿಸಿಲ್ಲ ಎಂದು ರೈತ ಮುಖಂಡರಾದ ಕುಂದಕೆರೆ ಸಂಪತ್ತು, ಮಾಡ್ರಹಳ್ಳಿ ಮಹದೇವಪ್ಪ ಆರೋಪಿಸಿದರು.