ಎರಡು ಎಕರೆ ಭೂ ಮಂಜೂರಾತಿ ಮಾಡಿ

12sgr3
ಸಾಗರದಲ್ಲಿ ಕಟ್ಟಡ ಕಾರ್ಮಿಕರು ಸಂಘಕ್ಕೆ ಭೂ ಮಂಜೂರಾತಿ ಕೋರಿ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು. ಆರ್.ಶ್ರೀನಿವಾಸ್ ಮೇಸ್ತ್ರಿ, ಕೆ.ಸಿದ್ದಪ್ಪ, ಶ್ರೀನಾಥ್ ಭಟ್, ಕೇಶವ, ರಾಜು ಇತರರಿದ್ದರು.
Published on

ಸಾಗರ: ತಾಲೂಕಿನ ಬಳಸಗೋಡು ಗ್ರಾಮದ ಸ.ನಂ.36ರ ಸರ್ಕಾರಿ ಭೂಮಿಯಲ್ಲಿ ಎರಡು ಎಕರೆಯನ್ನು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘಕ್ಕೆ ಮಂಜೂರು ಮಾಡುವಂತೆ ಒತ್ತಾಯಿಸಿ ಸೋಮವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಂಘದಿಂದ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಸಂಘಟಿತ ಹಾಗೂ ಅಸಂಘಟಿತ 14 ಸಾವಿರ ಕಾರ್ಮಿಕರಿದ್ದು ಸಂಘವು ಕಾರ್ಮಿಕರ ಶ್ರೇಯೋಭಿವೃದ್ದಿಗೆ ಹಲವು ದಶಕಗಳಿಂದ ನಿರಂತರ ಶ್ರಮಿಸುತ್ತಿದೆ. 2010ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸಂಘವನ್ನು ಅಧಿಕೃತವಾಗಿ ಉದ್ಘಾಟಿಸಿದ್ದೆ. ಅಂದಿನಿಂದ ಇಂದಿನವರೆಗೂ ಸಂಘದ ಚಟುವಟಿಕೆ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಕಾರ್ಮಿಕರ ದೈನಂದಿನ ಚಟುವಟಿಕೆ, ಸಂಘದ ಕಾರ್ಯ ಚಟುವಟಿಕೆ, ಶುಭ ಸಮಾರಂಭಗಳಿಗೆ ಸಮುದಾಯ ಭವನ ಅಗತ್ಯವಿದೆ. ಹಿಂದಿನ ಶಾಸಕರ ಅವಧಿಯಲ್ಲಿ ಬಳಸಗೋಡು ಗ್ರಾಮದಲ್ಲಿ ಜಾಗ ಮಂಜೂರಾಗಿತ್ತು. ಜತೆಗೆ ಐದು ಕೋಟಿ ರೂ. ಹಣ ಸಹ ಮಂಜೂರು ಮಾಡುವ ಭರವಸೆ ನೀಡಲಾಗಿತ್ತು. ಹಿಂದೆ ಅರ್ಧ ಎಕರೆ ಜಾಗ ಮಂಜೂರಾಗಿದ್ದು, ಇದಕ್ಕೆ ಹೊಂದಿಕೊಂಡು ಇನ್ನೂ ಒಂದೂವರೆ ಎಕರೆ ಜಾಗವಿದೆ. ಮಂಜೂರಾತಿಗಾಗಿ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಅದನ್ನು ಸಹ ಸಂಘಕ್ಕೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿದ ಶಾಸಕರು, ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಇರುವ ಜಾಗವನ್ನು ತಕ್ಷಣ ಮಂಜೂರಾತಿ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಪ್ರಮುಖರಾದ ಆರ್.ಶ್ರೀನಿವಾಸ್ ಮೇಸ್ತ್ರಿ, ಕೆ.ಸಿದ್ದಪ್ಪ ಮಾತನಾಡಿದರು. ಚಂದ್ರು, ರಾಜು ಎಸ್.ಎನ್.ನಗರ, ಶ್ರೀನಾಥ್ ಭಟ್, ಕೇಶವ, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net