

ಮಹಾಲಿಂಗಪುರ: ಪಟ್ಟಣಕ್ಕೆ ಬಸ್ ಡಿಪೋ ಮಂಜೂರಿ ಮಾಡುವಂತೆ ಆಗ್ರಹಿಸಿ ಶ್ರೀ ರಾಮಕೃಷ್ಣ ಹೆಗಡೆ ಪ್ರತಿಷ್ಠಾನದ ಅಧ್ಯಕ್ಷ ಸಿದ್ದು ಶಿರೋಳ, ಮಾಲದಾರ ಶೈಕ್ಷಣಿಕ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಲೀಕ್ ಮಾಲದಾರ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಬರೆದ ಮನವಿ ಪತ್ರವನ್ನು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹಾಗೂ ಸ್ಥಳೀಯ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರಿಗೆ ನೀಡಿದ ಅವರು, ಇದು ನಮ್ಮ 40 ವರ್ಷಗಳ ಬೇಡಿಕೆಯಾಗಿದೆ. ವಾಣಿಜ್ಯ ನಗರಿ ಮಹಾಲಿಂಗಪುದಲ್ಲಿ ರಾಜ್ಯದ ಎರಡನೇ ಅತಿ ದೊಡ್ಡ ಕೃಷಿ ಮಾರುಕಟ್ಟೆ ಇದೆ. ಪಟ್ಟಣ ಅಂದಾಜು 70 ಸಾವಿರ ಜನಸಂಖ್ಯೆ ಹೊಂದಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳು, ಅನೇಕ ರಾಷ್ಟ್ರೀಕೃತ ಹಣಕಾಸು ಸಂಸ್ಥೆಗಳು, ರಾಜ್ಯದ ಪ್ರಸಿದ್ಧ ಆಸ್ಪತ್ರೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ರಾಜ್ಯದ ಪ್ರಸಿದ್ಧ ಕಲಾವಿದರು ಇದ್ದಾರೆ.
ಸಂಜೆ 5 ಗಂಟೆ ನಂತರ ಮುಧೋಳ, ಬಾಗಲಕೋಟೆ, ಚಿಕ್ಕೋಡಿ, ನಿಪ್ಪಾಣಿ, ಬೆಳಗಾವಿ ಪಟ್ಟಣಗಳಿಗೆ ತೆರಳಲು ಬಸ್‌ಗಳೇ ಇಲ್ಲದಂತಾಗಿದೆ. ಮೂಡಲಗಿ ತಾಲೂಕಿನ 30 ಗ್ರಾಮಗಳು, ರಾಯಬಾಗ ತಾಲೂಕಿನ 10 ಗ್ರಾಮಗಳು, ರಬಕವಿ-ಬನಹಟ್ಟಿ ತಾಲೂಕಿನ 8 ಗ್ರಾಮಗಳು, ಮುಧೋಳ ತಾಲೂಕಿನ 10 ಗ್ರಾಮಗಳ ಜನತೆ ತಮ್ಮ ದೈನಂದಿನ ವ್ಯವಹಾರ, ಆಸ್ಪತ್ರೆಗೆ ಹಾಗೂ ಶಾಲೆ ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಸಮರ್ಪಕ ಬಸ್‌ಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಮಹಾಲಿಂಗಪುರದಲ್ಲೇ ಬಸ್ ಡಿಪೋ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮಹಮ್ಮದರಫೀಕ್ ಮಾಲದಾರ, ಈಶ್ವರ ಮುರಗೋಡ, ಮಲ್ಲು ಮಿರ್ಜಿ, ಅರಮಾನ ಮಾಲದಾರ ಇತರರಿದ್ದರು.