ರಾಜಧಾನಿಯಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ

vidhana soudha
Published on

ಬೆಂಗಳೂರು: ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಮತಗಟ್ಟೆ ಸಿಬ್ಬಂದಿಯ ಎರಡನೇ ಹಂತದ ರಾಂಡಮೈಸೇಷನ್ ಅನ್ನು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಸಾಮಾನ್ಯ ವೀಕ್ಷಕರುಗಳ ಸಮ್ಮುಖದಲ್ಲಿ ಶನಿವಾರ ಕೈಗೊಂಡು ನಿಯೋಜನೆಗೆ ಒಪ್ಪಿಗೆ ಪಡೆಯಲಾಯಿತು.

ನಗರದ ಮಲ್ಲೇಶ್ವರದಲ್ಲಿ ಪಾಲಿಕೆಯ ಐಪಿಪಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕರು ಪಾಲ್ಗೊಂಡರು. ಈ ವೇಳೆ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 24 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ 1 ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ 3 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಅದರಂತೆ, 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 43,123 ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲು ನಿರ್ಧರಿಸಲಾಯಿತು.

17ರಿಂದ ಎರಡನೇ ಹಂತದ ತರಬೇತಿ:

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳಿಗೆ ಈ ತಿಂಗಳ 17ರಂದು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ಎರಡನೇ ಹಂತದ ತರಬೇತಿಯನ್ನು ನಡೆಸಲಾಗುತ್ತದೆ. ಏ.24ರಂದು ಅಂತಿಮ ಹಂತದ ರಾಂಡಮೈಸೇಷನ್ ನಡೆಸಲಾಗುತ್ತದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಇದೇ ವೇಳೆ ಮತದಾನದ ದಿನ ಕಾರ್ಯನಿರ್ವಹಿಸಲು ಮೈಕ್ರೋ ಅಬ್ಸವರ್ಸ್ ನೇಮಿಸುವ ಹಾಗೂ ಅವರಿಗೆ ತರಬೇತಿ ನೀಡುವ ಕುರಿತು ಸಾಮಾನ್ಯ ವೀಕ್ಷಕರೊಂದಿಗೆ ಚರ್ಚಿಸಲಾಯಿತು.

ಸಭೆಯಲ್ಲಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕಕರಾದ ಮಕ್ರಂದ್ ಪಾಂಡುರಂಗ್, ಗಾಯತ್ರಿ ರಾಥೋರ್, ವಾಣಿ ಮೋಹನ್, ಎಂಸಿಸಿ ನೊಡಲ್ ಅಧಿಕಾರಿ ಮುನೀಶ್ ಮೌದ್ಗಿಲ್, ಪಾಲಿಕೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ಕೆ.ಎ ದಯಾನಂದ್, ವಿನೋತ್ ಪ್ರಿಯಾ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಪಾಲಿಕೆಯ 28 ಕ್ಷೇತ್ರಗಳಿಗೆ ಮತಗಟ್ಟೆ ಸಿಬ್ಬಂದಿ ವಿವರ:

ಕ್ಷೇತ್ರದ ಹೆಸರು ಮತಗಟ್ಟೆ ಸಿಬ್ಬಂದಿ

ಬೆಂಗಳೂರು ಉತ್ತರ 2,911 13,373

ಬೆಂಗಳೂರು ಕೇಂದ್ರ 2,125 10,201

ಬೆಂಗಳೂರು ದಕ್ಷಿಣ 2,120 10,175

ಬೆಂಗಳೂರು ಗ್ರಾ. 1,417 6,801

ಚಿಕ್ಕಬಳ್ಳಾಪುರ 411 1973

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net