

ತರೀಕೆರೆ: ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಮೀಸಲಿಡುವ ಜಾಗದ ಬಗ್ಗೆ ಅರಣ್ಯ ಇಲಾಖೆ ಅಭಿಪ್ರಾಯ ಕೇಳುವ ಕ್ರಮ ಸರಿಯಲ್ಲ ಎಂದು ಜಿಲ್ಲಾ ಎಸ್ಸಿ ಎಸ್ಟಿ ದೌರ್ಜನ್ಯ ಸಮಿತಿ ಸದಸ್ಯ ಕೆ.ನಾಗರಾಜ್ ಹೇಳಿದರು.
ಬುಧವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸಿ ಡಾ.ಕೆ.ಜೆ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಉಪ ವಿಭಾಗೀಯ ಮಟ್ಟದ ಎಸ್ಸಿ ಎಸ್ಟಿ ದೌರ್ಜನ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೌದ್ಧ ವಿಹಾರಕ್ಕೆ ಮೀಸಲಿಡಲು ಒತ್ತಾಯಿಸಿರುವ ಜಾಗ ಕಂದಾಯ ಇಲಾಖೆ ವ್ಯಾಪ್ತಿಯಲಿದ್ದರೂ ಅರಣ್ಯ ಇಲಾಖೆ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಧೋರಣೆ ತೋರದೆ ಬೌದ್ಧ ವಿಹಾರಕ್ಕೆ ಬೇಕಾದ 5 ಎಕರೆ ಜಾಗವನ್ನು ತಕ್ಷಣ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಎಸಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ಕಂದಾಯ ಇಲಾಖೆಗೆ ಸೇರಿದ ಜಾಗ ಬೌದ್ದ ವಿಹಾರಕ್ಕೆ ಮೀಸಲಿಡಲು ಅರಣ್ಯ ಇಲಾಖೆ ಅಭಿಪ್ರಾಯ, ಅನುಮತಿ ಪಡೆಯಬೇಕಿಲ್ಲ. ತಕ್ಷಣವೇ ಬೌದ್ದ ವಿಹಾರ ನಿರ್ಮಾಣಕ್ಕೆ ಬೇಕಾದ ಜಾಗ ಮೀಸಲಿಡುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದಲಿತ ಮುಖಂಡ ಎ.ರಾಮು ಮಾತನಾಡಿ, ಎನ್.ಆರ್.ಪುರ ತಾಲೂಕಿನ ವಿವಿಧಕಡೆ ವಾಸಿಸುತ್ತಿರುವ ದಲಿತರಿಗೆ ಸೂಕ್ತ ನಿವೇಶನ ಇಲ್ಲದಾಗಿದೆ. ಕೂಡಲೇ ನಿವೇಶನ ರಹಿತರನ್ನು ಗುರುತಿಸಿ ಹಕ್ಕುಪತ್ರ ಸಹಿತ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಎಸಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ಇಂಥ ಸಮಸ್ಯೆಗಳು ಎಸ್ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆವರೆಗೆ ಬರಬಾರದು. ಸಂಬಂಧಿಸಿದ ಇಲಾಖೆ ಅದಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ದಲಿತ ಮುಖಂಡ ಕೆ.ಬಾಲರಾಜ್ ಮಾತನಾಡಿ, ಹಾದಿಕೆರೆ ಗ್ರಾಮ ಸಮೀಪದ ಋಷಿಪುರ ಸರ್ವೇ ನಂ. 6ರಲ್ಲಿರುವ ನಕ್ಷೆ ದಾರಿ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಬೇಕು. ಈ ಬಗ್ಗೆ 5 ವರ್ಷಗಳಿಂದ ಒತ್ತಾಯಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.
ತರೀಕೆರೆ ತಹಸೀಲ್ದಾರ್ ವಿ.ಎಸ್.ರಾಜೀವ್, ಎನ್.ಆರ್.ಪುರ ತಹಸೀಲ್ದಾರ್ ತನುಜ ಸವದತ್ತಿ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಸಿಡಿಪಿಒ ಕೆ.ಸಿ.ಜ್ಯೋತಿಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜುನಾಥ್ ಮತ್ತಿತರರಿದ್ದರು.