

ಮಂಡ್ಯ: ಸಮಾಜದಲ್ಲಿ ಅಗತ್ಯವಿರುವವರಿಗೆ ಸೇವೆ ನೀಡುವುದೇ ನಮ್ಮ ಸಂಸ್ಥೆಯ ಧ್ಯೇಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ನಗರದ ಬಂದೀಗೌಡ ಬಡಾವಣೆಯ ನಗರಸಭೆ ಸಂಕೀರ್ಣ ಕಟ್ಟಡದಲ್ಲಿ ಆಯೋಜಿಸಿದ್ದ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆಯ ಜಿಲ್ಲಾ ಕಚೇರಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ 10 ತಿಂಗಳಲ್ಲಿ 150ಕ್ಕೂ ಹೆಚ್ಚು ಸೇವಾಕಾರ್ಯಗಳನ್ನು ಸಮಾಜಕ್ಕೆ ಸಮರ್ಪಿಸಿದ್ದೇವೆ. ಉತ್ತಮವಾಗಿ ಬೆಳೆಯುತ್ತಿರುವ ಅಲಯನ್ಸ್ ಸಂಸ್ಥೆಗೆ ಕಚೇರಿ ಅಗತ್ಯವಿತ್ತು. ನೊಂದವರಿಗೆ, ಅಗತ್ಯಯುಳ್ಳವರ ನೋವು ಆಲಿಸಲು ಕಚೇರಿ ಸಹಾಯವಾಗುತ್ತಿದೆ ಎಂದರು.
ಸಾಕಷ್ಟು ಜನರು ನೆರವು ಪಡೆದುಕೊಳ್ಳಲು ಅಲಯನ್ಸ್ ಸಂಸ್ಥೆಗೆ ಆಗಮಿಸುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು, ಕ್ಯಾನ್ಸರ್ ಪೀಡಿತರು ಹೀಗೆ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಎನ್ನುವವರು ಹೆಚ್ಚಾಗಿದ್ದಾರೆ. ಸಂಸ್ಥೆಯಲ್ಲಿ 600ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ವರ್ಷ 1500ಕ್ಕೂ ಹೆಚ್ಚು ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ. ಸೇವಾ ಚಟುವಟಿಕೆಗೆ ನೆರವಾಗುವ ಮನಸ್ಸುಗಳನ್ನು ಸದಸ್ಯರನ್ನಾಗಿ ಸ್ವೀಕರಿಸುತ್ತೇವೆ ಎಂದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಮಾತನಾಡಿ, ಭಾರತೀಯರಿಂದಲೇ ಪ್ರಾರಂಭವಾದ ಅಲಯನ್ಸ್ ಸೇವಾ ಸಂಸ್ಥೆ ಇದೀಗ ಅಂತಾರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದೆ. ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಸಂಸ್ಥೆಗಳಿವೆ. ಅದರಲ್ಲಿ ಮುಂಚೂಣಿ ಸೇವಾ ಸಂಸ್ಥೆಯಾಗಿ ಅಲಯನ್ಸ್ ಬೆಳೆಯುತ್ತಿದೆ. ನಾಯಕತ್ವ ಗುಣ ಬೆಳಸಿಕೊಳ್ಳುವುದರೊಂದಿಗೆ ಸೇವಾ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ. ಜಿಲ್ಲೆಯಲ್ಲಿ ಕೇವಲ 10 ತಿಂಗಳ ಅವಧಿಯಲ್ಲಿ 30 ಅಲಯನ್ಸ್ ಸಂಸ್ಥೆಗಳು ಚಟುವಟಿಕೆ ಆರಂಭಿಸಿವೆ. ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಅವರು ಉತ್ತಮ ಸೇವಾ ಕಾರ್ಯ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಸಂಸ್ಥೆಯ 1ನೇ ಉಪ ಪ್ರಾಂತಪಾಲ ಎಚ್.ಮಾದೇಗೌಡ, 2ನೇ ಉಪ ಪ್ರಾಂತಪಾಲ ಕೆ.ಆರ್.ಶಶಿಧರ್ ಈಚಗೆರೆ, ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಟಿ.ಎನ್.ರಕ್ಷಿತ್‌ರಾಜ್, ಜಿಲ್ಲಾಧ್ಯಕ್ಷೆ ರತ್ನಮ್ಮ, ಪ್ರೊ.ಡೇವಿಡ್ ಪ್ರತಿಭಾಂಜಲಿ, ಮಂಜುನಾಥ್, ಶಿಲ್ಪಾ, ದಯಾನಂದ್ ಇತರರಿದ್ದರು.