ಜೆಡಿಎಸ್ ಉಳಿಸಿಕೊಳ್ಳಲು ಬಿಜೆಪಿ ಜತೆ ಮೈತ್ರಿ

Alliance with BJP to save JDS
Published on

ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ನಂತರ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜತೆ ಮೈತ್ರಿಗೆ ಜೆಡಿಎಸ್ ನಾಯಕರು ಮುಂದಾಗಿದ್ದು, ಅದನ್ನು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿಕೊಂಡಿದ್ದು, ಯಾರ ಜತೆಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ಆ ಪಕ್ಷದ ನಿರ್ಧಾರವಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ತತ್ತ್ವ ಸಿದ್ಧಾಂತಗಳು ಜೆಡಿಎಸ್‌ಗೆ ಮುಖ್ಯವಲ್ಲ. ಪ್ರತಿ ಬಾರಿ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಾಗ ಜೆಡಿಎಸ್ ಬಿಜೆಪಿಯೊಂದಿಗೆ ಸೇರಿದ್ದಾರೆ. ಹಿಂದೆ ಕಾಂಗ್ರೆಸ್ ಜತೆಗೆ ಇದ್ದರು ಈಗ ಬಿಜೆಪಿ ಜತೆಗೆ ಹೋಗುತ್ತಿದ್ದಾರೆ ಎಂದರು.
ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಅವರಲ್ಲಿರುವ ಅಸಮಾಧಾನವನ್ನು ಪಕ್ಷದ ವರಿಷ್ಠರು ಶಮನ ಮಾಡಲಿದ್ದಾರೆ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವುದು ಪಕ್ಷರ ವರಿಷ್ಠರು ತೀರ್ಮಾನ ಮಾಡುತ್ತಾರೆ.
ಕಾಂಗ್ರೆಸ್ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಉದಯನಿ ಸ್ಟಾಲಿನ್ ತಮ್ಮ ರಾಜ್ಯದ ಸ್ಥಿತಿಗತಿ ಮೇಲೆ ಮಾತನಾಡಿರಬಹುದು. ಅದಕ್ಕೂ ನಮಗೂ ಸಂಬಂಧವಿಲ್ಲ. ಲೋಕಸಭೆ ಚುನಾಔಣೆಗೆ ಪಕ್ಷದ ನಾಯಕರು ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಾರೆ ಎಂದು ಎನ್.ಎಸ್.ಬೋಸರಾಜು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net