28 ಕ್ಷೇತ್ರಗಳಲ್ಲೂ ಮೈತ್ರಿಕೂಟಕ್ಕೆ ಗೆಲುವು: ಬಿ.ಎಸ್.ಯಡಿಯೂರಪ್ಪ

27 ಎಸ್ಕೆಪಿ 1
ಹೊಸೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಬಿ.ವೈ.ರಾಘವೇಂದ್ರ, ಕೆ.ಎಸ್.ಗುರುಮೂರ್ತಿ, ಸಂಕ್ಲಾಪುರ ಹನುಮಂತಪ್ಪ, ಮಹದೇವ್ ಪಾಟೀಲ್, ಅಶೋಕ್ ನಾಯ್ಕ್ ಇತರರಿದ್ದರು.
Published on

ಶಿಕಾರಿಪುರ: ರಾಜ್ಯದಲ್ಲಿ ಮುಕ್ತಾಯವಾದ ಮೊದಲ ಹಂತದ ಚುನಾವಣೆಯಲ್ಲಿ ಗ್ರಾಮಾಂತರ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ. ಬಿಜೆಪಿ 14 ಕ್ಷೇತ್ರಗಳಲ್ಲೂ ಗೆಲ್ಲುವಷ್ಟು ಉತ್ತಮ ವಾತಾವರಣ ಕಂಡು ಬಂದಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಹೊಸೂರಿನಲ್ಲಿ ಶನಿವಾರ ಸಭೆಯಲ್ಲಿ ಮಾತನಾಡಿದ ಅವರು, ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಸ್ಥಾನಗಳಲ್ಲೂ ನಮ್ಮ ಮೈತ್ರಿಕೂಟ ಗೆಲುವು ಸಾಧಿಸಲಿದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂಬ ಜನರ ಸಂಕಲ್ಪ ನಿಜವಾಗಲಿದೆ ಎಂದರು.
ಶಿವಮೊಗ್ಗ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅಭಿವೃದ್ಧಿಯ ಕನಸುಗಾರ, ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಕನಸನ್ನು ಸಾಕಾರಗೊಳಿಸಿದ್ದಾರೆ. ಅವರ ಮೊದಲ ಆದ್ಯತೆಯೇ ಅಭಿವೃದ್ಧಿ. ಮೂರನೇ ಬಾರಿ ಸಂಸದರಾದರೂ ಜನರ ಅಪೇಕ್ಷೆಯಂತೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಬಾರಿ ಮೂರು ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ. ಪುರಸಭೆಯ ಸದಸ್ಯರಾಗಿ, ಶಾಸಕರಾಗಿ, ಸಂಸದರಾಗಿ ಅವರನ್ನು ರಾಜಕೀಯ ರಂಗದಲ್ಲಿ ಬೆಳೆಸಿದ್ದು ಜನರು. ಕ್ಷೇತ್ರದ ಜನರ ಆಶೀರ್ವಾದ ಸದಾ ಅವರ ಮೇಲಿರುತ್ತದೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬಿಜೆಪಿ ಅದ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ಮಹದೇವ ಪಾಟೀಲ್, ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಬಿಜೆಪಿ ಮುಖಂಡರಾದ ಎಚ್.ಟಿ.ಬಳಿಗಾರ್, ಸುನಿಲ್ ವಲ್ಯಾಪುರೆ, ಮಹೇಶ್ ಹುಲ್ಮಾರ್, ರಾಮನಾಯ್ಕ ಮುಂತಾದವರಿದ್ದರು.

ಗ್ಯಾರಂಟಿಗೆ ದುಡ್ಡಿಲ್ಲ
ರಾಜ್ಯ ಸರ್ಕಾರಕ್ಕೆ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಮುದ್ರಾಂಕ ಶುಲ್ಕ, ವಿದ್ಯುತ್ ದರ, ಅಬಕಾರಿ ಸುಂಕ ಎಲ್ಲವೂ ಹೆಚ್ಚಳ ಮಾಡಿ ಹಣ ಹೊಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದ ನಾಲು ಸಾವಿರ ರೂ.ಕಿಸಾನ್ ಸಮ್ಮಾನ್ ನೀಡುತ್ತಿದ್ದೆ. ಈ ಸರ್ಕಾರ ಅದನ್ನೂ ರದ್ದು ಮಾಡಿದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net