ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ಮಾತ್ರ

Alliance only in Lok Sabha elections
ಮುದ್ದೇಬಿಹಾಳದಲ್ಲಿ ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪಕ್ಷದ ಅಭ್ಯರ್ಥಿ ನೂರಅಹ್ಮದ್ ಶಿವಣಗಿ ಪರ ಪಕ್ಷದ ಚಿಹ್ನೆ ಕಸಬರಿಗೆ ಹಿಡಿದುಕೊಂಡು ಪ್ರಚಾರ ನಡೆಸಿದರು. ವಿಜಯ ಶರ್ಮಾ, ಭೋಗೇಶ ಸೋಲಾಪೂರ, ಡಾ. ಗೀತಾ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
Published on

ಮುದ್ದೇಬಿಹಾಳ: ದೇಶದ 28 ರಾಷ್ಟ್ರೀಯ ಪಕ್ಷಗಳು ಒಗ್ಗೂಡಿ ಬಿಜೆಪಿ ಎದುರು ಸೆಡ್ಡು ಹೊಡೆದು ನಿಂತಿವೆ. ಆಪ್ ಕೂಡಾ ಇವರ ಜತೆಗಿದೆ. ಇದು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತ. ಈಗ ನಡೆದಿರುವ ಸ್ಥಳೀಯ ಸಂಸ್ಥೆ, ಮುಂಬರುವ ತಾಪಂ, ಜಿಪಂ, ಬಿಬಿಎಂಪಿ ಮತ್ತು ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗಳಲ್ಲಿ ನಮ್ಮ ಪಕ್ಷ ಸ್ವತಂತ್ರ ಶಕ್ತಿಯ ಮೇಲೆ ಸ್ಪರ್ಧಿಸುತ್ತದೆ ಎಂದು ಆಪ್ ರಾಜ್ಯಾಧ್ಯಕ್ಷ, ಹಿರಿಯ ಚಿತ್ರನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ಇಲ್ಲಿನ ಪುರಸಭೆಯ 18ನೇ ವಾರ್ಡ್‌ಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ನೂರಅಹ್ಮದ್ ಶಿವಣಗಿ ಪರ ಪ್ರಚಾರ ನಡೆಸಲು ಸೋಮವಾರ ಇಲ್ಲಿಗೆ ಆಗಮಿಸಿದ್ದ ಅವರು ಪ್ರಚಾರಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಮ್ ಆದ್ಮಿ ಪಕ್ಷ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಪಾರದರ್ಶಕ ಆಡಳಿತ ನೀಡುತ್ತಿದೆ. ಜಾತಿವಾದಿ, ಕೋಮುವಾದಿ, ಕುಟುಂಬ ರಾಜಕಾರಣ ಹೆಚ್ಚಾಗುತ್ತಿರುವ ಮತ್ತು ಆರ್ಥಿಕವಾಗಿ ಭದ್ರರಾಗಿರುವ ಕುಟುಂಬ, ಪಕ್ಷಗಳ ಜತೆಗೆ ಈ ದಿನಗಳಲ್ಲಿ ಜನಸಾಮಾನ್ಯರ ಪಕ್ಷವಾಗಿರುವ ಆಪ್ ಹೋರಾಟಕ್ಕಿಳಿಯಬೇಕಾಗಿದೆ. ಸಾಮಾನ್ಯ ಜನರನ್ನು ಕಣಕ್ಕಿಳಿಸಿ ಸಾಮಾನ್ಯರ ರೀತಿಯಲ್ಲಿ ಕೆಲಸ ಮಾಡಿ ಗೆಲ್ಲಬೇಕು ಅನ್ನೋದು ನಮ್ಮ ಗುರಿ. ಆದರೆ ಇಂದಿನ ಸ್ಥಿತಿಯಲ್ಲಿ ಇದು ಕಷ್ಟವಾಗಿದೆ ಎಂದರು.

ಈಚೆಗೆ ನಡೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೋಸ್ಕರ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವು. ಗೆಲ್ಲಲಾಗದಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈಗ ಖಾತೆ ತೆರೆಯುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳ ಮರು ಚುನಾವಣೆಯಲ್ಲಿ ನಂಜನಗೂಡು, ಶಿರಾ ತಾಲೂಕು, ಮುದ್ದೇಬಿಹಾಳ ಮತ್ತು ಮಂಗಳೂರಿನಲ್ಲಿ ಸೇರಿ 4 ಕಡೆ ಅಭ್ಯರ್ಥಿ ನಿಲ್ಲಿಸಿದ್ದೇವೆ ಎಂದರು.

ನಂತರ 18ನೇ ವಾರ್ಡ್‌ನ ಮನೆಮನೆಗೆ ತೆರಳಿ ಪಕ್ಷದ ಚಿಹ್ನೆ ಕಸಬರಿಗೆ ಪ್ರದರ್ಶಿಸಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ, ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪೂರ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಡಾ. ಗೀತಾ, ಜಿಲ್ಲಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನ್ನವರ, ತಾಲೂಕು ಉಸ್ತುವಾರಿ ಮಹಿಬೂಬ ಹಡಲಗೇರಿ, ಸಂಜು ಶೆಟಗಾರ, ವೀರೇಶ ಹಿರೇಮಠ, ಮಹ್ಮದರಫೀಕ ಗೊಳಸಂಗಿ ಇತರರಿದ್ದರು. ಚಿತ್ರನಟರೊಬ್ಬರು ತಮ್ಮ ಮನೆಗೆ ಬಂದಿದ್ದನ್ನು ಕಂಡು ಹರ್ಷಗೊಂಡ ಅವರ ಅಭಿಮಾನಿಗಳು ಸೆಲ್ಪಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net