

ವಿಜಯವಾಣಿ ಸುದ್ದಿಜಾಲ ತುಮಕೂರು
ಮೂಡಾ ಅವ್ಯವಹಾರ ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಉದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ತುಮಕೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.
ಜಿಲ್ಲಾ ಕುರುಬರ ಸಂಘ, ತುಮಕೂರು, ಕಾಳಿದಾಸ ವಿದ್ಯಾವರ್ಧಕ ಸಂಘ, ತುಮಕೂರು, ಕನಕ ಯುವ ಸೇನೆ ತುಮಕೂರು ಹಾಗೂ ತುಮಕೂರು ಜಿಲ್ಲೆಯ ಕುರುಬ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯಪಾಲರ ಅಧಿಕಾರ ದುರುಪಯೋಗ ಮಾಡಿಕೊಂಡು ಸ್ಥಿರ ಸರ್ಕಾರವನ್ನು ಕೆಡವಲು ಹುನ್ನಾರ ನಡೆಸಲಾಗಿದೆ. ಪ್ರಜಾಪ್ರಭುತ್ವ
ವಿರೋಧ ನಡೆಯನ್ನು ರಾಜ್ಯದ ಜನರು ಖಂಡಿಸುತ್ತಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಹೆಸರಿಗೆ ಕಳಂಕ ತರುವ ಹುನ್ನಾರ ನಡೆಸಬಾರದು ಎಂದು ಕನಕ ಯುವಸೇನೆಯ ಅಧ್ಯಕ್ಷ ಕೆಂಪರಾಜು ಹೇಳಿದರು.
ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಕಪ್ಪು ಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯ ವರ್ಚಸ್ಸಿಗೆ ಮಸಿ ಬಳಿದು ಅವರನ್ನು ರಾಜಕೀಯವಾಗಿ ಮುಗಿಸಿಯೇ ಬಿಡುವ ಹುನ್ನಾರ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರ ಕುತಂತ್ರಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರೂ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಶಾಶ್ವತವಾಗಿ ಹಿಂದುಳಿದ ವರ್ಗದವರನ್ನು ಅಧಿಕಾರದಿಂದ ದೂರ ಇಡಬಹುದು ಎಂಬುದು ಇವರ ಉದ್ದೇಶವಾಗಿದೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಅವ್ಯವಹಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ತಳಕು ಹಾಕಲಾಗುತ್ತಿದೆ. ರಾಜ್ಯಪಾಲರ ವಿರುದ್ಧ ಗೋಬ್ಯಾಕ್ ಗೆಹ್ಲೋಟ್ ಚಳವಳಿ ಹಮ್ಮಿಕೊಳ್ಳುವುದಾಗಿ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಹೇಳಿದರು.ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಸುರೇಶ್, ಕನಕ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯೆ ಸುನೀತಾ, ಸಂಘದ ಅಂತರಿಕ ಲೆಕ್ಕ ಪರಿಶೋಧಕ ಟಿ.ಇ.ರಘುರಾಮ್ ಮತ್ತಿತರರು ಇದ್ದರು.