ತಿಪಟೂರಿನಲ್ಲಿ ಮೈತ್ರಿಗೆ ಮುಖಭಂಗ!

2
Published on

ಕಾಂಗ್ರೆಸ್​ಗೆ ನಗರಸಭೆ ಅಧಿಕಾರ | ಕೊನೇ ಕ್ಷಣದಲ್ಲಿ ಕೈ ಹಿಡಿದ ಬಿಜೆಪಿ ಸದಸ್ಯರು

ತಿಪಟೂರು: ತಿಪಟೂರು ನಗರಸಭೆ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯೆ, ಸಾಮಾನ್ಯರಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿಗೆ ಮುಖಭಂಗವಾಗಿದ್ದು, ಕಾಂಗ್ರೆಸ್​ ತಂತ್ರಗಾರಿಕೆ ಮೂಲಕ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.


ಶಾಸಕ, ಸಂಸದರ ಮತ ಸೇರಿ 33 ಸದಸ್ಯ ಬಲದ ತಿಪಟೂರು ನಗರಸಭೆಯ ಅಧ್ಯಕ್ಷರಾಗಿ 13ನೇ ವಾರ್ಡ್​ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಕಾಂಗ್ರೆಸ್​ ಜತೆ ಗುರುತಿಸಿಕೊಂಡಿದ್ದ ಸದಸ್ಯೆ ಎ.ಎಸ್​.ಯಮುನಾ ದರಣೇಶ್​, 3ನೇ ವಾರ್ಡ್​ ಸದಸ್ಯೆ ಮೇನಾ ಸುಜಿತ್​ ಭೂಷಣ್​ ತಲಾ 18 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗುವ ಮೂಲಕ ಹೆಚ್ಚು ಸ್ಥಾನ ಹೊಂದಿದ್ದ ಬಿಜೆಪಿ&ಜೆಡಿಎಸ್​ ಮೈತ್ರಿಗೆ ಮುಖಭಂಗ ಮಾಡಿದರು.
ತಿಪಟೂರು ನಗರಸಭೆಯಲ್ಲಿ ಕಾಂಗ್ರೆಸ್​ 9+1(ಶಾಸಕ), ಬಿಜೆಪಿ 12+1(ಸಂಸದ), ಜೆಡಿಎಸ್​ 4 ಹಾಗೂ 6 ಪಕ್ಷೇತರ ಸದಸ್ಯರಿದ್ದರು. ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಪರವಾಗಿ 18 ಮತಗಳು ಲಭಿಸಿದ್ದರಿಂದ ಬಹುದಿನದ ನಂತರ ನಗರಸಭೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.


ಬಿಜೆಪಿಯ 12+1 ಜತೆಗೆ ಮೊದಲ ಅವಧಿಯಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ 6 ಪಕ್ಷೇತರರು ಮತ್ತು ಮೈತ್ರಿ ಪಕ್ಷ ಜೆಡಿಎಸ್​ನ್ನ 4 ಸದಸ್ಯರ ಬಲದಿಂದ ನಿರಾಯಾಸವಾಗಿ ಅಧಿಕಾರ ಹಿಡಿಯಬಹುದು ಎಂಬ ಬಿಜೆಪಿ ಲೆಕ್ಕಾಚಾರಗಳು ಉಲ್ಟಾ ಆಗಿದೆ. ಸಂಸದ ವಿ.ಸೋಮಣ್ಣ ಮತದಾನದಲ್ಲಿ ಭಾಗವಹಿಸಿದ್ದರೂ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ವಿಲವಾಗಿದೆ. ಬಿಜೆಪಿ ಪಾಳಯದಿಂದ ಅಧ್ಯಕ್ಷ ಸ್ಥಾನಕ್ಕೆ 29ನೇ ವಾರ್ಡ್​ನ್ನ ಪಕ್ಷೇತರ ಸದಸ್ಯೆ ಲತಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್​ನ್ನ ಕೇಬಲ್​ ಸಂಗಮೇಶ್​ ಉಮೇದುವಾರಿಕೆ ಸಲ್ಲಿಸಿದ್ದರೂ ಕಾಂಗ್ರೆಸ್​
ತಂತ್ರಗಾರಿಕೆ ಮುಂದೆ ಆಟ ನಡೆಯಲಿಲ್ಲ. ತಲಾ 15 ಮತಗಳನ್ನಷ್ಟೇ ಪಡೆಯುವ ಮೂಲಕ ನಗರಸಭೆಯಲ್ಲಿ ಬಿಜೆಪಿ ಪಾರಮ್ಯವನ್ನು ಕೊನೆಗೊಳಿಸಿದರು.


ಮೀಸಲಾತಿ ಘೋಷಣೆಯಾದ ನಂತರ ಕಾಂಗ್ರೆಸ್​ ನಡೆಸಿದ ತಂತ್ರಗಾರಿಕೆಯಲ್ಲಿ ಬಿಜೆಪಿ, ಜೆಡಿಎಸ್​ನ ತಲಾ ಇಬ್ಬರು ಸದಸ್ಯರು ಹಾಗೂ ನಾಲ್ವರು ಪಕ್ಷೇತರರರನ್ನು ಸೆಳೆದಿದ್ದರಿಂದ ನಿರಾಯಾಸವಾಗಿ ಅಧಿಕಾರ ಒಳಿಸಿಕೊಂಡಿದೆ. ಅಂತಿಮವಾಗಿ ಶಾಸಕ ಷಡಕ್ಷರಿ ಮತ ಸೇರಿ 10 ಸದಸ್ಯರಿಂದ ಕಾಂಗ್ರೆಸ್​ ಪಾಳಯದ ಸಂಖ್ಯೆ 18ಕ್ಕೆ ಏರಿಕೆಯಾಗಿ ಮ್ಯಾಜಿಕ್​ ಸಂಖ್ಯೆ 17ಕ್ಕೂ ಒಂದು ಮತ ಹೆಚ್ಚಾಗಿಯೇ ಪಡೆದಿದೆ. ಮೈತ್ರಿ ಪಕ್ಷದ ಇಬ್ಬರು ಸದಸ್ಯರನ್ನು ಸೇರಿದಂತೆ ಸ್ವಪಕ್ಷದ ಇಬ್ಬರು ಸದಸ್ಯರನ್ನು ಹಿಡಿದಿಟ್ಟುಕೊಳ್ಳಲಾಗದ ಬಿಜೆಪಿ ಕೈಚೆಲ್ಲಿತು.

ಬಿಜೆಪಿ ಸದಸ್ಯರಿಂದ ಹೈಡ್ರಾಮ: ಚುನಾವಣೆಯಲ್ಲಿ ಸಂಖ್ಯಾ ಬಲ ಕುಸಿದಿರುವುದು ಖಾತ್ರಿಯಾದೊಡನೆ ಬಿಜೆಪಿ ಸದಸ್ಯರು ನಗರಸಭೆ ಆವರಣದಲ್ಲಿಯೇ ಹೈಡ್ರಾಮ ಶುರುವಿಟ್ಟುಕೊಂಡರು. ನಮ್ಮ ಪಕ್ಷದ ಇಬ್ಬರು ಸದಸ್ಯರಿಗೆ ಆಮಿಷ ತೋರಿಸಿ ಮತ ಹಾಕಿಸಿಕೊಂಡಿದ್ದಾರೆ ಎಂದು ದೂರಿ ಆಕ್ರೋಶ ಹೊರಹಾಕಿದರು. ಎರಡು ದಿಗಳಿಂದಲೂ ಎಲ್ಲಿಯೂ ಕಾಣಿಸಿಕೊಳ್ಳದ ಬಿಜೆಪಿ ಸದಸ್ಯ ಅಶ್ವಿನಿದೇವರಾಜು ಸೋಮವಾರ ನಗರಸಭೆಯಲ್ಲಿ ಕಾಣಿಸಿಕೊಂಡು ಮತದಾನದಲ್ಲಿ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net