ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಮೈತ್ರಿ ಹೋರಾಟ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ

nikhil
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ವಾಲ್ಮೀಕಿ ನಿಗಮದ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದೇ ಪಾದಯಾತ್ರೆ ಉದ್ದೇಶವಾಗಿದ್ದು, ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಮೈತ್ರಿ ಹೋರಾಟ ನಿರತವಾಗಿರುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಉತ್ತಮವಾಗಿ ಮಳೆಯಾಗುತ್ತಿದೆ. ಇದೀಗ ಕೃಷಿ ಚಟುವಟಿಕೆ ನಡೆಯುತ್ತಿದ್ದು, ರೈತರ ಕೃಷಿ ಚಟುವಟಿಕೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪಾದಯಾತ್ರೆ ಮುಂದೂಡಲು ಮನವಿ ಮಾಡಲಾಗಿತ್ತು. ಆದರೆ ಬಿಜೆಪಿ ವರಿಷ್ಠರು ಮುಂದೂಡುವುದು ಸರಿಯಲ್ಲ ಎಂದು ಹೇಳಿದ ಕಾರಣ ಪಾದಯಾತ್ರೆಗೆ ಒಪ್ಪಿದ್ದೇವೆ. ರಾಜ್ಯದ ಜನರ ಪರವಾಗಿ ಈ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಪಾದಯಾತ್ರೆಯನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಪರ್ಯಾಯ ಸಮಾವೇಶ ಮಾಡುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರಿಂದ ನೋಟಿಸ್ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆರ್‌ಟಿಐ ಕಾರ್ಯಕರ್ತನ ದೂರನ್ನು ಆಧರಿಸಿ ನೋಟಿಸ್ ನೀಡಲಾಗಿದೆ. ಆದರೆ ಸರ್ಕಾರ ರಾಜ್ಯಪಾಲರ ವಿರುದ್ಧವೇ ನಿರ್ಣಯ ಕೈಗೊಂಡಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಮುಂದೆ ಇದು ಯಾವ ರೀತಿ ಆಗಲಿದೆ ಎಂಬುದನ್ನು ಕಾದು ನೋಡಿ ಎಂದರು.

ವಾಲ್ಮೀಕಿ ನಿಗಮದಲ್ಲಿ ಹಗರಣ ಸಂಬಂಧಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಹಗರಣ. 89 ಕೋಟಿ ರೂ. ಹಗರಣ ನಡೆದಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಗರಣದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂಬುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಸರ್ಕಾರದ ಒಳಗೆ ಕೆಲಸ ಮಾಡುತ್ತಾರೆ. ಹಾಗಾಗಿ ಸರ್ಕಾರವೇ ಇದಕ್ಕೆ ಹೊಣೆ. ಇದರ ವಿರುದ್ಧ ನಮ್ಮ ಹೋರಾಟ ಎಂದು ತಿಳಿಸಿದರು.

ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಆಸ್ತಿ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಮನಗರದಲ್ಲಿ ನಮ್ಮ ಆಸ್ತಿ ಎಷ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. 1985ರಲ್ಲಿ ಕುಮಾರಸ್ವಾಮಿ ಅವರು ಕೇತಗಳ್ಳಿ ಬಳಿ ಸಿನಿಮಾ ವಿತರಣೆಯಲ್ಲಿ ಬಂದಿದ್ದ ಲಾಭದ ಹಣದಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ರಾಮನಗರದಲ್ಲಿ ಬೇರೆ ಯಾವುದೇ ಆಸ್ತಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ-ಜೆಡಿಎಸ್ ಸರ್ಕಾರದ ಅವಧಿಯ ಭ್ರಷ್ಟಾಚಾರದ ಪಟ್ಟಿ ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇಷ್ಟು ದಿನ ಕಾಂಗ್ರೆಸ್ ನಾಯಕರು ಯಾಕೆ ಸುಮ್ಮನಿದ್ದರು? 2013ರಿಂದ 2018ರತನಕ ಅವರೇ ಅಧಿಕಾರದಲ್ಲಿದ್ದರು. ಆಗ ಯಾಕೆ ಈ ಬಗ್ಗೆ ತನಿಖೆ ಮಾಡಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ತಮ್ಮ ಭ್ರಷ್ಟಾಚಾರದ ವಿಷಯವನ್ನು ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಜನರ ಬೆಂಬಲ ಸಿಕ್ಕಿದೆ. ಅದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚು ಸ್ಥಾನ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net