

ಮಂಡ್ಯ: ಪ್ರಸ್ತುತ ಒತ್ತಡದ ಬದುಕಿನಲ್ಲಿರುವ ಮನುಷ್ಯರಿಗೆ ಹಾಸ್ಯ ದಿವ್ಯೌಷಧವಾಗಿದೆ ಎಂದು ಮಿಮಿಕ್ರಿ ಕಲಾವಿದ ಗೋಪಿ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಸೋಷಿಯೇಷನ್ ಆ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲೆ ‘ಬದುಕಿಗೆ ಹಾಸ್ಯ ದಿವ್ಯೌಷಧ ಎಂದ ಘೋಷವಾಕ್ಯ’ದೊಂದಿಗೆ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನ ಉದ್ಘಾಟಿಸಿ ಪ್ರಧಾನ ಭಾಷಣ ಮಾಡಿದ ಅವರು, ಇವತ್ತಿನ ಜನರಿಗೆ ಆರೋಗ್ಯಕರ ನಗು ಬೇಕಾಗಿದೆ. ಏಕೆಂದರೆ ನಮ್ಮದೇ ಜಂಜಾಟದಲ್ಲಿ ಮುಳುಗಿದ್ದೀವಿ. ಅದಕ್ಕಾಗಿ ಒಂದಷ್ಟು ಸಮಯದಲ್ಲಿ ನಗು, ನಡಿಗೆ, ವಿಶ್ರಾಂತಿ ಅಗತ್ಯವಿದೆ. ಉತ್ತಮ ಆರೋಗ್ಯಕ್ಕಾಗಿ ಆಯುಷ್ಯ ವೃದ್ದಿಗಾಗಿ ಹಾಸ್ಯ ಬೇಕಾಗಿದೆ ಎಂದು ನುಡಿದರು.
ಹಾಸ್ಯ ಕಲಾವಿದರಿಗೆ ವೇದಿಕೆ ಸಿಕ್ಕಿದೆ. ನಮ್ಮ ಸುತ್ತಮುತ್ತ ನಡೆಯುವ ಬದುಕಿನ ಘಟನೆಗಳಿಗೆ ಹಾಸ್ಯ ಲೇಪನ ಕೊಟ್ಟು ಹೇಳುವುದೇ ನಮ್ಮ ಉದ್ದೇಶವಾಗಿದೆ. ಬೇರೆ ಇನ್ನೇನೂ ಹೇಳಲು ಸಾಧ್ಯವಿಲ್ಲ. ನಮ್ಮ ಹಾಸ್ಯಗಳಿಗೆ ಜನರು ನಕ್ಕು ನಲಿದರೆ ಅಷ್ಟೇ ಸಾಕು ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ ಎಂದರು.
ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಮಾತನಾಡಿ, ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಬಹುವೇಗವಾಗಿ ಜನರ ಸೇವೆಯೊಂದಿಗೆ ಬೆಳೆಯುತ್ತಿವೆ. ಜನಮನ್ನಣೆ ಗಳಿಸುವಂತೆ ಶ್ರಮಿಸುತ್ತಿರುವ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮತ್ತು ಪದಾಧಿಕಾರಿಗಳಿಗೆ ಅಭಿನಂದಿಸುತೇನೆ. ಎರಡು ಪ್ರಾಂತೀಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ ಎಂದರು.
ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ಕಳೆದ 10 ತಿಂಗಳಿಂದ ಅಲಯನ್ಸ್ ಸಂಸ್ಥೆ ಜನಸೇವಾ ಚಟುವಟಿಕೆ, ಪರಿಸರ, ಆರೋಗ್ಯ, ಅಗತ್ಯಯುಳ್ಳವರಿಗೆ ಆರ್ಥಿಕ ನೆರವು, ಪರಿಕರಗಳನ್ನು ನೀಡುವುದರ ಮೂಲಕ ಸೇವಾ ಕಾರ್ಯ ಸಮರ್ಪಿಸುತ್ತಿವೆ. ಸಂಸ್ಥೆ ವಿಶ್ವದಲ್ಲಿ ಸುಮಾರು 27 ರಾಷ್ಟ್ರಗಳಲ್ಲಿ 1.5 ಲಕ್ಷ ಸದಸ್ಯರನ್ನು ಹೊಂದಿದೆ ಎಂದು ಹೇಳಿದರು.
ಪ್ರಾಂತೀಯ ಸಮ್ಮೇಳನ ಅಧ್ಯಕ್ಷೆ ಕೆ.ಎನ್.ನೀನಾ ಪಟೇಲ್, ಜೆಡಿಎಸ್ ಯುವ ಮುಖಂಡ ಸುರೇಶ್, ನಿವೃತ್ತ ವೈದ್ಯಾಧಿಕಾರಿ ಡಾ.ಸತೀಶ್‌ಚಂದ್ರ, ಸಮ್ಮೇಳನದ ಅತಿಥೇಯ ಸಮಿತಿ ಅಧ್ಯಕ್ಷ ಕೆ.ಆರ್.ಶಶಿಧರ್ ಈಚಗೆರೆ, ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಎಚ್.ಪಿ.ದಯಾನಂದ, ವಲಯಾಧ್ಯಕ್ಷರಾದ ಎಂ.ಲೋಕೇಶ್, ಪ್ರಮೀಳಾಕುಮಾರಿ, ಶಿಲ್ಪಾ, ಕೌಶಲ ಅಲಯನ್ಸ್ ಸಂಸ್ಥೆ ಅಧ್ಯಕ್ಷ ರಕ್ಷಿತ್‌ರಾಜ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಮಂಜುನಾಥ್ ಇತರರಿದ್ದರು.