

ಅರಸೀಕೆರೆ: ನಗರ ನಿವಾಸಿಗಳ ಕುಂದು, ಕೊರತೆ ಆಲಿಸಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಹೇಳಿದರು.
ಪಾದಚಾರಿಗಳು ಸುಗಮವಾಗಿ ರಸ್ತೆ ದಾಟಲು ಅವಶ್ಯವಿರುವ ಯೋಜನೆ ರೂಪಿಸಲಾಗಿದೆ. ನಗರದ ವ್ಯಾಪ್ತಿಯಲ್ಲಿ ಅಂಗಡಿ, ಮುಂಗಟ್ಟು ತೆರೆದಿರುವ ವರ್ತಕರು ಕಸ ಸಂಗ್ರಹಿಸಿ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅದಕ್ಕಾಗಿ ಬಕೆಟ್ ವಿತರಣೆ ಮಾಡಲು ಸೂಚನೆ ನೀಡಿದ್ದೇವೆ. ಆಯಕಟ್ಟಿನ ಜಾಗಗಳಲ್ಲಿರುವ ಸ್ಮಶಾನಗಳ ಅಭಿವೃದ್ಧಿಗೂ ಅನುದಾನ ಮೀಸಲಿರಿಸಲಾಗಿದೆ. ಸಣ್ಣಪುಟ್ಟ ಹೋಟೆಲ್ , ಗಾಡಿ ಮಾಲೀಕರ ಅನುಕೂಲಕ್ಕೆ ತಕ್ಕಂತೆ ಬಹುನಿರೀಕ್ಷಿತ ಪುಡ್ ಕೋರ್ಟ್ ತೆರೆದು ಒಂದೆಡೆ ಆಹಾರ ವಿತರಣೆಗೆ ಜಾಗ ಗುರುತಿಸಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಅಮರಗಿರಿ ಮಾಲೇಕಲ್ ತಿರುಪತಿ, ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ, ಮಾಡಾಳು ಸ್ವರ್ಣಗೌರಿ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಿವೆ. ಭಕ್ತರ ಅನುಕೂಲ ಮನಗಂಡು ಸೂಚನಾಫಲಕ ಅಳವಡಿಸುವ ಉದ್ದೇಶ ಹೊಂದಿದ್ದೇವೆ. ನನ್ನ ಅಧಿಕಾರದ ಅವಧಿಯಲ್ಲಿ ನಗರ ನಿವಾಸಿಗಳ ಆಶಯಕ್ಕೆ ಸ್ಪಂದಿಸಲಿದ್ದೇನೆ. ಒಳ್ಳೆಯ ಕೆಲಸ ಮಾಡುವಾಗ ವಿರೋಧ ಎದುರಾದರೆ ಏನೂ ಮಾಡಲಾಗದು ಎಂಬುದನ್ನು ಮನಗಂಡಿದ್ದೇನೆ. ಸಮಾಜಮುಖಿ ಕಾರ್ಯ ಕೈಗೆತ್ತಿಕೊಂಡಾಗ ಮಾಧ್ಯಮ ಸ್ನೇಹಿತರು ಸಹಕಾರ ನೀಡಬೇಕು. ಅನ್ಯ ಧರ್ಮದ ದೇವರು ಹಾಗೂ ಧಾರ್ಮಿಕ ಆಚರಣೆಗಳನ್ನು ಗೌರವದಿಂದ ಕಾಣುವ ಮನಸ್ಥಿತಿ ನನ್ನದಾಗಿದೆ ಎಂದರು.
ಉಪಾಧ್ಯಕ್ಷ ಮನೋಹರ್, ಮಾಜಿ ಅಧ್ಯಕ್ಷ ಜಿ.ಟಿ.ಗಣೇಶ್, ಸದಸ್ಯ ರಾಜಶೇಖರ ಸೇರಿದಂತೆ ಹಲವರು ಹಾಜರಿದ್ದರು.