

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಅಲಯನ್ಸ್ ಸಂಸ್ಥೆಯು ಕ್ಯಾನ್ಸರ್ ಬಗ್ಗೆ ಅರಿವು ಮತ್ತು ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ಭೈರಿ ಹೇಳಿದರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಅಲಪ್ಪಿ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಮಂಡ್ಯ ಅಲಪ್ಪಿ ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ ಮತ್ತು ವಯೋವೃದ್ಧರಿಗೆ ವಸ್ತ್ರ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಯಾನ್ಸರ್ ಮಹಿಳೆಯರು, ಪುರುಷರು, ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂತಹ ಜೀವಹಾನಿ ರೋಗಗಳ ಬಗ್ಗೆ ಅರಿವು ಹೆಚ್ಚಿಸುವುದು. ವ್ಯಾಪಕ ಪ್ರಚಾರ ಮಾಡಿ ತಡೆಗಟ್ಟುವ ನಿಟ್ಟಿನಲ್ಲಿ ಅಲಯನ್ಸ್ ಸಂಸ್ಥೆಗಳು ತನ್ನದೇ ಆದ ರೀತಿಯಲ್ಲಿ ಸೇವೆ ನೀಡುತ್ತಿದೆ ಎಂದು ತಿಳಿಸಿದರು.
ಮಾನವ ಸೇವೆಯ ಉದ್ದೇಶವೇ ಅಲಯನ್ಸ್ ಸಂಸ್ಥೆಯ ಮುಖ್ಯ ಧ್ಯೇಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸೇವಾ ಸಂಸ್ಥೆಗಳಿವೆ. ಅವುಗಳಲ್ಲಿ ಅಲಯನ್ಸ್, ರೋಟರಿ, ಲಯನ್ಸ್ ಸಂಸ್ಥೆಗಳಿದ್ದು, ಒಂದೊಂದು ಸಂಸ್ಥೆಗಳು ಬೇರೆ ಬೇರೆ ಉದ್ದೇಶವನ್ನು ಪರಿಪೂರ್ಣಗೊಳಿಸಲು ಸ್ಥಾಪಿತಗೊಂಡಿವೆ. ನಿವೃತ್ತ ಪೊಲೀಸ್ ಗೆಳೆಯರೆಲ್ಲ ಸೇರಿ ಸೇವಾ ಮನೋಭಾವದಿಂದ ಅಲಯನ್ಸ್ ಸಂಸ್ಥೆಯೊಂದಿಗೆ ತೊಡಗಿಸಿಕೊಂಡು ನಾಯಕತ್ವ ಗುಣ ಮತ್ತು ಮಾನವಸೇವೆ ಮಾಡಲು ಉದ್ದೇಶಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಬಿಡುವುದು ಹೆಚ್ಚಾಗುತ್ತಿದೆ. ಪರಿಣಾಮ ಇಳಿ ವಯಸ್ಸಿನಲ್ಲಿ ಅನಾಥ ಭಾವದಿಂದ ಬದುಕಬೇಕಿದೆ. ಇಂತಹ ತಂದೆ ಮತ್ತು ತಾಯಿ ಅವರ ಸೇವೆ ಮಾಡುವುದು ಅಲಯನ್ಸ್ ಸಂಸ್ಥೆಯ ಧ್ಯೇಯವೂ ಆಗಿದೆ. ಈ ನಿಟ್ಟಿನಲ್ಲಿ ವಯೋವೃದ್ದರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
ಅಲಪ್ಪಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಶಂಕರಯ್ಯ, ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಜಿಲ್ಲಾ ಗವರ್ನರ್ ಮಾದೇಗೌಡ, 1ನೇ ಉಪ ಜಿಲ್ಲಾ ಗವರ್ನರ್ ಕೆ.ಆರ್.ಶಶಿಧರ್ ಈಚಗೆರೆ, 2ನೇ ಜಿಲ್ಲಾ ಉಪ ಗವರ್ನರ್ ಚಂದ್ರಶೇಖರ್ ಮತ್ತಿತರರಿದ್ದರು.