

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಸ್ಥಳಗಳು ಹೋರಾಟಗಾರರು ಸೇರಿ ಜಿಲ್ಲೆಯ ಐತಿಹಾಸಿಕ ಘಟನೆಗಳನ್ನು ಮೆಲಕು ಹಾಕುವ ಮತ್ತು ದಾಖಲಿಸುವ ಉದ್ದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ವಿವಿಧ ಇಲಾಖೆ, ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಆ. 1ರಿಂದ 15ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದಲ್ಲಿ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈ ವರ್ಷ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಯುವ ಸಮುದಾಯಕ್ಕೆ, ವಿದ್ಯಾರ್ಥಿಗಳಿಗೆ ಹೆಮ್ಮೆ, ಸ್ಫೂರ್ತಿ ತರುವಂತೆ ಆಚರಿಸಲಾಗುತ್ತಿದೆ. ಆ. 1ರಿಂದ ಜಿಲ್ಲೆಯ ಕಾಲೇಜುಗಳಲ್ಲಿ 77 ವಿಶೇಷ ಉಪನ್ಯಾಸಗಳು ಜರುಗಲಿವೆ ಎಂದರು.
ಆ. 5ರಿಂದ 14ರವರೆಗೆ ಪುರಾತತ್ವ ಇಲಾಖೆಯಿಂದ ನಗರದ ಆರ್ಟ್ ಗ್ಯಾಲರಿಯಲ್ಲಿ ಸ್ವಾತಂತ್ರ್ಯ ಹೋರಾಟ, ಉತ್ತರ ಕರ್ನಾಟಕದ ಹೋರಾಟಗಳ ಮತ್ತು ಹುಬ್ಬಳ್ಳಿ ಇಂದಿರಾ ಗಾಜಿನಮನೆಯಲ್ಲಿ ಆ. 12ರಿಂದ ಆ. 15ರವರೆಗೆ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಆ. 10ರಂದು ಕರ್ನಾಟಕ ವಿಶ್ವ ವಿದ್ಯಾಲಯ, ಜಿಲ್ಲಾಡಳಿತ, ಇತಿಹಾಸ ಮತ್ತು ಪುರಾತತ್ವ ವಿಭಾಗದಿಂದ ಜಿಲ್ಲೆಯ ಐತಿಹಾಸಿಕ ಅವಲೋಕನ ಕುರಿತು ವಿವಿ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ವಿದ್ಯಾವರ್ಧಕ ಸಂಘದಲ್ಲಿ ಆ. 12ರಿಂದ 15ರವರೆಗೆ ಪತ್ರಗಾರ ಇಲಾಖೆಯಿಂದ ಐತಿಹಾಸಿಕ ದಾಖಲೆಗಳು ಹಾಗೂ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಆ. 13ರಂದು ಹುಬ್ಬಳ್ಳಿ ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಜನರಿಂದ ಬೃಹತ್ ಪಾರಂಪರಿಕ ನಡಿಗೆ, ಆ. 15ರಂದು ಮಕ್ಕಳಿಗೆ ಕವಾಯತು, ರೂಪಕ ಸ್ಪರ್ಧೆ, ಖಾದಿ ನೂಲು ತೆಗೆಯುವ ಕಾರ್ಯಕ್ರಮ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯ ಹಂಚಿಕೆ ಮಾಡಿರುವ ಇಲಾಖೆಗಳು ಉತ್ತಮ ರೀತಿಯಿಂದ ಕಾರ್ಯಕ್ರಮ ಸಂಘಟಿಸಬೇಕು ಎಂದು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ, ತಹಸೀಲ್ದಾರ ಕೆ.ಆರ್. ಪಾಟೀಲ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಪ್ರಾದೇಶಿಕ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಎಸ್.ಎಂ.ಹುಡೆದಮನಿ, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.